SK Home Ad
Home ಸಿನಿ ಮಿಲ್ಸ್ ಆ ದಿನಗಳು.. ಈಗ ಬರ್ತಿದೆ ಬಲರಾಮನ ದಿನಗಳು; ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುತ್ತಾ ಈ...

ಆ ದಿನಗಳು.. ಈಗ ಬರ್ತಿದೆ ಬಲರಾಮನ ದಿನಗಳು; ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುತ್ತಾ ಈ ಸಿನಿಮಾ?

0
48

ಕನ್ನಡ ಚಿತ್ರರಂಗದಲ್ಲಿ ‘ಆ ದಿನಗಳು’ ಸಿನಿಮಾ ಸೃಷ್ಟಿಸಿದ ಇತಿಹಾಸ ಅಷ್ಟಿಷ್ಟಲ್ಲ. ಅಂಡರ್‌ವರ್ಲ್ಡ್ ಕಥಾಹಂದರವನ್ನು ರಕ್ತಪಾತವಿಲ್ಲದೆ, ಕ್ಲಾಸಿಕ್ ಆಗಿ ತೋರಿಸಿ ಕಲ್ಟ್ ಸ್ಟೇಟಸ್ ಪಡೆದ ಆ ಚಿತ್ರದ ಮತ್ತೊಂದು ರೋಮಾಂಚನಕಾರಿ ಅಧ್ಯಾಯ ಈಗ ಶುರುವಾಗಿದೆ. ಹೌದು, ಈಗಾಗ್ಲೇ ತನ್ನ ವಿಭಿನ್ನವಾದ ಎರಡು ಹಾಡುಗಳು ಮತ್ತು ಬೆಂಕಿ ಟೀಸರ್ ಮೂಲಕ ಇಡೀ ಗಾಂಧಿನಗರದ ಗಮನ ಸೆಳೆದಿರೋ, ಉದ್ಯಮದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿರೋ ಚಿತ್ರವೇ “ಬಲರಾಮನ ದಿನಗಳು”. ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕಿರೋ ಹಿಟ್ ಸಿನಿಮಾಗಳ ಬರಗಾಲವನ್ನು ನೀಗಿಸಲು, ಪ್ರೇಕ್ಷಕರಿಗೆ ಕದನ ಕುತೂಹಲದ ರಸದೌತಣ ನೀಡಲು ಈ ಚಿತ್ರದ ಬಿಡುಗಡೆ ದಿನಾಂಕ ಈಗ ಅಧಿಕೃತವಾಗಿ ನಿಗಧಿಯಾಗಿದೆ. ಸಿನಿರಸಿಕರ ಬಹುದಿನಗಳ ಕಾಯುವಿಕೆಗೆ ಬ್ರೇಕ್ ಹಾಕಿ, ಈ ಬಹುನಿರೀಕ್ಷಿತ ಸಿನಿಮಾ ಜೂನ್ 26ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಅಪ್ಪಳಿಸುತ್ತಿದೆ. ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

‘ಆ ದಿನಗಳು’ ಚಿತ್ರದ ಮೂಲಕ ದೊಡ್ಡ ಕ್ರಾಂತಿ ಮಾಡಿದ್ದ ನಿರ್ದೇಶಕ ಕೆ.ಎಂ. ಚೈತನ್ಯ, ಮತ್ತೊಮ್ಮೆ ಅದೇ ಮಾಂತ್ರಿಕತೆಯನ್ನು ಮರುಸೃಷ್ಟಿಸಲು ಸಜ್ಜಾಗಿದ್ದಾರೆ. 80ರ ದಶಕದ ಬೆಂಗಳೂರಿನ ಭೂಗತ ಜಗತ್ತಿನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪದ್ಮಾವತಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅತ್ಯಂತ ಅದ್ಧೂರಿಯಾಗಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಇನ್ನು ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಸ್ಯಾಂಡಲ್‌ವುಡ್‌ನ ಟೈಗರ್ ವಿನೋದ್ ಪ್ರಭಾಕರ್. ಈ ಚಿತ್ರದಲ್ಲಿ ಅವರು ಹಿಂದೆಂದೂ ಕಾಣಿಸಿಕೊಳ್ಳದ ರಗಡ್ ಲುಕ್‌ನಲ್ಲಿ, ‘ಬಲರಾಮ’ನ ಭೀಕರ ಅವತಾರದಲ್ಲಿ ಅಬ್ಬರಿಸಿದ್ದಾರೆ. ಇವರಿಗೆ ಜೋಡಿಯಾಗಿ ಬಹುಭಾಷಾ ನಟಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದು, ಚಿತ್ರಕ್ಕೆ ಗ್ಲಾಮರ್ ಮತ್ತು ಎಮೋಷನಲ್ ಸ್ಪರ್ಶ ನೀಡಿದ್ದಾರೆ.

ಈ ಸಿನಿಮಾದ ಅಸಲಿ ಮಜಾ ಇರೋದೇ ಇದರ ತಾರಾಗಣದಲ್ಲಿ. ‘ಆ ದಿನಗಳು’ ಚಿತ್ರದಲ್ಲಿದ್ದ ಐಕಾನಿಕ್ ಪಾತ್ರಗಳು ಮತ್ತು ಕಲಾವಿದರು ಇಲ್ಲೂ ಮುಂದುವರೆದಿದ್ದಾರೆ. ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಮತ್ತು ಆಶೀಶ್ ವಿದ್ಯಾರ್ಥಿಯಂತಹ ದಕ್ಷಿಣ ಭಾರತದ ಘಟಾನುಘಟಿ ನಟರ ಜೊತೆಗೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಕೂಡ ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಹೀಗಾಗಿ ಪ್ರತಿಭಾವಂತ ಕಲಾವಿದರ ದೊಡ್ಡ ದಂಡೇ ಈ ಚಿತ್ರದಲ್ಲಿದೆ. ತಾಂತ್ರಿಕವಾಗಿಯೂ ಸಿನಿಮಾ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದ್ದು, ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಅವರ ಮ್ಯೂಸಿಕ್ ಚಿತ್ರದ ಅತಿ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಹೆಚ್.ಸಿ. ವೇಣು ಅವರ ಅದ್ಭುತ ಛಾಯಾಗ್ರಹಣ ಹಾಗೂ ಹರಿದಾಸ್ ಕೆ.ಜಿ.ಎಫ್ ಅವರ ಕತ್ತರಿ ಪ್ರಯೋಗ ಚಿತ್ರವನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ದಿದೆ. ಈಗಾಗ್ಲೇ ಬಿಡುಗಡೆಯಾಗಿರೋ ಟೀಸರ್ ಹಾಗೂ ಹಾಡುಗಳು ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡೋ ಮುನ್ಸೂಚನೆ ನೀಡುತ್ತಿವೆ. ಈ ಎಲ್ಲಾ ಹೈಪ್ ನೋಡುತ್ತಿದ್ದರೆ, ‘ಬಲರಾಮನ ದಿನಗಳು’ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವುದು ಖಚಿತ ಎನಿಸುತ್ತಿದೆ. ಅದೇನೆ ಇರಲಿ, ಜೂನ್ 26ನೇ ತಾರೀಖು ಥಿಯೇಟರ್‌ಗಳಲ್ಲಿ ಬಲರಾಮನ ಅಸಲಿ ಬಲ ಏನು ಅನ್ನೋದು ಕಣ್ಣಾರೆ ನೋಡಲು ಪ್ರೇಕ್ಷಕರು ಸಜ್ಜಾಗಬೇಕಿದೆ.