SK Home Ad
Home ಸುದ್ದಿ ರಾಜ್ಯ ಬಿಜೆಪಿ ಬದಿಗಿಟ್ಟು ತಮಿಳುನಾಡಲ್ಲಿ ಅಣ್ಣಾಮಲೈ ಸ್ವತಂತ್ರ ಹೋರಾಟ?

ಬಿಜೆಪಿ ಬದಿಗಿಟ್ಟು ತಮಿಳುನಾಡಲ್ಲಿ ಅಣ್ಣಾಮಲೈ ಸ್ವತಂತ್ರ ಹೋರಾಟ?

0
69

ಚೆನ್ನೈ: ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ ಕಮಲ ಪಾರ್ಟಿಯನ್ನು ತ್ಯಜಿಸಿ ಹೊಸ ಪಕ್ಷ ಸ್ಥಾಪನೆ ಮಾಡುವರೇ ಎನ್ನುವ ಪ್ರಶ್ನೆ ಈಗ ಎದ್ದಿದೆ. ಮಧುರೈ, ಕೊಯಮತ್ತೂರಿನಲ್ಲಿ ಅಣ್ಣಾಮಲೈ ಬೆಂಬಲಿಗರಿಂದ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಅಣ್ಣಾಮಲೈ 2.0 ಎನ್ನುವ ಸಂದೇಶವಿದೆ. ಅಂದರೆ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವ ಸಂದೇಶವನ್ನು ಈ ಮೂಲಕ ಸೂಕ್ಷ್ಮವಾಗಿ ನೀಡಲಾಗಿದೆ. ಇನ್ನೊಂದು ಪೋಸ್ಟರ್‌ನಲ್ಲಿ ‘ನಿರ್ಭೀತ ವ್ಯಕ್ತಿತ್ವಕ್ಕೆ ಯಾವುದೇ ಮಿತಿ ಇರುವುದಿಲ್ಲ’ ಎನ್ನುವ ಮಾತೂ ಇದೆ. ಬಿಜೆಪಿಯನ್ನು ಬದಿಗಿಟ್ಟು ಸ್ವತಂತ್ರ ಆಂದೋಲನವನ್ನೂ ಶುರು ಮಾಡಲು ಅಣ್ಣಾಮಲೈ, ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ವಿದೇಶದಿಂದ ಸೋಮವಾರ ವಾಪಸ್ಸಾಗಿರುವ ಆಣ್ಣಾಮಲೈ, ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಇನ್ನೆರಡು ದಿನ ಕಾಯಿರಿ ಎಂದು ಹೇಳಿದ್ದಾರೆ. ಇದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಅಣ್ಣಾಮಲೈ ಈಗಾಗಲೇ ಬಿಜೆಪಿ ರಾಜ್ಯ ಸಮಿತಿಯ ಎರಡು ಸಭೆಗಳಿಗೆ ಗೈರುಹಾಜರಾಗಿರುವುದೂ ಅವರು ಹೊಸ ಪಕ್ಷ ಹುಟ್ಟುಹಾಕುವ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಅಣ್ಣಾಮಲೈಗೆ ಬಿಜೆಪಿ ನಾಯಕರಾದ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಅವರೊಂದಿಗೆ ಯಾವುದೇ ಮನಸ್ತಾಪವಿಲ್ಲ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಎಲ್.ಸಂತೋಷ್ ಜೊತೆಯೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಆದರೆ ಕೆಲವೊಂದು ವೈಚಾರಿಕ ಸಂಗತಿಗಳು ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ. ಇತ್ತೀಚೆಗೆ ನಡೆದ ತಮಿಳುನಾಡು ಚುನಾವಣೆಯಲ್ಲಿ ಭ್ರಷ್ಟಾಚಾರದಿಂದ ಹೆಸರು ಕೆಡಿಸಿಕೊಂಡಿರುವ ಎಐಎಡಿಎಂಕೆ ಜೊತೆ ಮೈತ್ರಿ ಬೇಡ ಎನ್ನುವ ನಿಲುವನ್ನು ತಳೆದಿದ್ದರು. ಪಕ್ಷದ ಕೇಂದ್ರ ವರಿಷ್ಠರಿಗೂ ತಿಳಿಸಿದ್ದರು.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿಯಿಲ್ಲದೆ ಚುನಾವಣೆಗೆ ಹೋಗುವುದು ಸೂಕ್ತವಲ್ಲ ಎಂದು ಬಿಜೆಪಿ ವರಿಷ್ಠರು ಭಾವಿಸಿದ್ದರು. ಇದರ ಜೊತೆಗೆ ಚುನಾವಣೆಗೆ ಮೊದಲೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಅಣ್ಣಾಮಲೈಗೆ ರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿ ಕೊಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಕೊಟ್ಟಿಲ್ಲ. ಇವೆಲ್ಲವೂ ಅಣ್ಣಾಮಲೈ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.