SK Home Ad
Home ನಮ್ಮ ಜಿಲ್ಲೆ ವಿಜಯಪುರ ಭೀಮಾತೀರದ ಕೊಲೆ ಪ್ರಕರಣ: 12 ಜನ ಆರೋಪಿಗಳ ಬಂಧನ

ಭೀಮಾತೀರದ ಕೊಲೆ ಪ್ರಕರಣ: 12 ಜನ ಆರೋಪಿಗಳ ಬಂಧನ

0
41

ವಿಜಯಪುರ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಗೋವಿಂದಪುರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 12 ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸೋಮವಾರ ಇಂಡಿ ತಾಲೂಕು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಾಸಿದ್ಧ ಬಿರಾದಾರ (44), ಮಹೇಶ ಬಿರಾದಾರ (22), ರಾಜಕುಮಾರ ಕೋಳಿ (28), ರಾಜು ಉಗಾರ (20), ಯಲ್ಲಪ್ಪ ಅರಕೇರಿ (25), ಕಲ್ಲನಗೌಡ ಪಾಟೀಲ (65), ಲಾಯಪ್ಪ ಬಿರಾದಾರ (65), ಸುಭಾಷ ಬಿರಾದಾರ (21), ರಾವಸಾಬ್ ಅವಧೂತ ಬಿರಾದಾರ (20), ಗಜಾನಂದ ಭುತಾಳೆ ಬಿರಾದಾರ (20), ಮಲಕಾರಿ ಕೋಳಿ (18), ಸಂಜು ಅರಕೇರಿ ಎಂದು ಗುರುತಿಸಲಾಗಿದೆ.

ಇಬ್ಬರ ಮೃತದೇಹದಲ್ಲಿ ಗುಂಡು ಪತ್ತೆ: ಭೀಮಾತೀರದಲ್ಲಿ ನಡೆದಿದ್ದ ಆರು ಜನರ ದಾರುಣ ಕೊಲೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಮನಬಂದ ರೀತಿಯಲ್ಲಿ ಥಳಿಸಿ ಅಮಾನವೀಯ ರೀತಿಯಲ್ಲಿ ಕೊಲೆಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತಹದೇಹಗಳ ದೃಶ್ಯಾವಳಿಗಳು ಮನಕಲುಕಿದ್ದವು.

ಈಗ ಈ ಪ್ರಕರಣದ ತನಿಖೆ ಮುಂದುವರೆದಿದ್ದು ಕೊಲೆಗೀಡಾಗಿರುವ ಇಬ್ಬರ ಮೃತದೇಹದಲ್ಲಿ ಗುಂಡುಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರಾಥಮಿಕ ಮಾಹಿತಿ ಆಧರಿಸಿ ಬಂಧಿಸಲಾಗಿರುವ ಆರನೇಯ ಆರೋಪಿಯಾಗಿರುವ ಕಲ್ಲನಗೌಡ ಪಾಟೀಲ ಅವರ ಲೈಸನ್ಸ್ ಹೊಂದಿದ ಪಿಸ್ತೂಲ್ ಈ ಕೃತ್ಯದಲ್ಲಿ ಬಳಕೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಇಬ್ಬರ ಮೃತದೇಹದಲ್ಲಿ ಇದೇ ಪಿಸ್ತೂಲ್ ಸಾಮ್ಯತೆ ಇರುವ ಗುಂಡುಗಳು ಪತ್ತೆಯಾಗಿರುವುದು ಘಟನೆಯಲ್ಲಿ ಪಿಸ್ತೂಲ್ ಬಳಕೆಯಾಗಿರುವುದು ಮತ್ತಷ್ಟು ಪುಷ್ಠೀಕರಿಸಿದಂತಾಗಿದೆ.

ಉಳಿದವರ ಬಂಧನಕ್ಕೆ ಜಾಲ: ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಈಗಾಗಲೇ ಈ ತನಿಖಾ ತಂಡ 12 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರಕರಣದಲ್ಲಿ ಸರಿಸುಮಾರು 21ಕ್ಕೂ ಹೆಚ್ಚು ಜನರು ಭಾಗಿಯಾದ ನಿರೀಕ್ಷೆ ಇದ್ದು, ಅವರೆಲ್ಲರ ಬಂಧನಕ್ಕೂ ಜಾಲ ಬೀಸಲಾಗಿದೆ.

ದೂರು ನೀಡಿದವರಿಗೆ ಕೆಲವರ ಹೆಸರುಗಳು ಗೊತ್ತಿರದ ಸಾಧ್ಯತೆಯೂ ಇದೆ. ಹೀಗಾಗಿ `ಇತರರು’ ಎಂದು ನಮೂದಿಸಿ ದೂರು ನೀಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಭಾಗಿಯಾದವರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯ ದೃಷ್ಟಿಯಿಂದ ಕೆಲವೊಂದು ಅಂಶಗಳನ್ನು ಬಹಿರಂಗಪಡಿಸುತ್ತಿಲ್ಲ, ಶೀಘ್ರದಲ್ಲಿಯೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.