SK Home Ad
Home ನಮ್ಮ ಜಿಲ್ಲೆ ಧಾರವಾಡ ಹಿಜಾಬ್ ನಿರ್ಧಾರ ವಿರೋಧಿಸಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ

ಹಿಜಾಬ್ ನಿರ್ಧಾರ ವಿರೋಧಿಸಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ

0
44

ಹುಬ್ಬಳ್ಳಿ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ರದ್ದುಗೊಳಿಸಿದ ರಾಜ್ಯ ಸರ್ಕಾರದ ನಿಲುವು ವಿರೋಧಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಸೋಮವಾರ ಕೇಸರಿ ಶಾಲು ವಿತರಿಸಲಾಯಿತು.

ವಿದ್ಯಾನಗರದಲ್ಲಿರುವ ಕನಕದಾಸ ಪಿಯು ಕಾಲೇಜಿನಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಶಾಲು ಹೊದ್ದುಕೊಂಡು ಕಾಲೇಜು ಆವರಣ ಪ್ರವೇಶಿಸುವಂತೆ ಮತ್ತು ಪ್ರತಿ ದಿನವೂ ಶಾಲು ಧರಿಸಿಕೊಂಡೇ ಬರುವಂತೆ ಮನವಿ ಮಾಡಿದರು.

ಹಿಜಾಬ್ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಆದರೂ, ಸರ್ಕಾರ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಇದು ವಿದ್ಯಾರ್ಥಿಗಳ ನಡುವೆ ವಿಷ ಬೀಜ ಬಿತ್ತುವ ಹುನ್ನಾರ ನಡೆಸಿದಂತಾಗಿದೆ. ಕಾಂಗ್ರೆಸ್‌ನವರು ಮರಿ ತಾಲಿಬಾನಿಗಳ ರೀತಿ ವರ್ತಿಸುತ್ತಿದೆ. ಎಲ್ಲಾ ಮತ ಸಂಪ್ರದಾಯಗಳಿಗೆ ಆದ್ಯತೆ ಕೊಡಲಿ. ಸರ್ಕಾರದ ನಿರ್ಧಾರದಿಂದ ಯೂನಿಫಾರ್ಮ್ ಉದ್ದೇಶ ಮಣ್ಣು ಪಾಲಾಗುತ್ತದೆ ಎಂದು ದೂರಿದರು.

ಸರ್ಕಾರದ ಧೋರಣೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ನೀತಿ ಎಂಬಂತಾಗಿದೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಿಡಿ ಕಾರಿದರು. ಕೇಸರಿ ಶಾಲು ವಿತರಣೆಯ ಸಂಬಂಧ ಹುಬ್ಬಳ್ಳಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ನಗರದ ಎಲ್ಲಾ ಪ್ರಮುಖ ಕಾಲೇಜುಗಳ ಮುಂಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.