ಸಿಕಂದರಾಬಾದ್ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ; ಹವಾಲಾ ಜಾಲದ ಸುಳಿವು
ಸಿಕಂದರಾಬಾದ್: ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ರೈಲಿನ ಮೂಲಕ ಸಾಗಿಸಲಾಗುತ್ತಿದ್ದ ₹1.22 ಕೋಟಿ ಮೌಲ್ಯದ ಶಂಕಿತ ಹವಾಲಾ ಹಣವನ್ನು ಸರ್ಕಾರಿ ರೈಲ್ವೆ ಪೊಲೀಸರು (GRP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ದೇವಗಿರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನಿಂದ ಈ ಭಾರಿ ಮೊತ್ತದ ನಗದು ಪತ್ತೆಯಾಗಿದೆ.
ಬಂಧಿತನನ್ನು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ನಿವಾಸಿ ವಿಜಯ್ ಅಂಬಾದಾಸ್ ಗುಪ್ತಾ (40) ಎಂದು ಗುರುತಿಸಲಾಗಿದೆ. ಆತ ಸಾಯಿ ನಗರದ ಬೃಂದಾವನ್ ಕಾಲೋನಿಯ ನಿವಾಸಿಯಾಗಿದ್ದು, ಅಂಬಾದಾಸ್ ಗುಪ್ತಾ ಅವರ ಪುತ್ರನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 26 ರಂದು ದೇವಗಿರಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17057) ನಲ್ಲಿ ಜಿಆರ್‌ಪಿ ಹಾಗೂ ಆರ್‌ಪಿಎಫ್ ಸಿಬ್ಬಂದಿ ಜಂಟಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬೊಲ್ಲಾರಂ ಮತ್ತು ಮಲ್ಕಾಜ್‌ಗಿರಿ ರೈಲು ನಿಲ್ದಾಣಗಳ ನಡುವೆ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ವಿಜಯ್ ಗುಪ್ತಾ ಅನುಮಾನಾಸ್ಪದವಾಗಿ ಲಗೇಜ್ ಬ್ಯಾಗ್ ಹೊತ್ತು ಸಾಗುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ತಕ್ಷಣವೇ ಆತನನ್ನು ತಡೆದು ವಿಚಾರಣೆ ನಡೆಸಿದಾಗ, ಆತ ತನ್ನ ಬಳಿ ಇದ್ದ ₹1,22,70,000 ಹಣವನ್ನು ಮುಂಬೈನ “ಕಾಂತ ಜ್ಯುವೆಲ್ಲರಿ”ಗೆ ಸಂಬಂಧಿಸಿದ “ಸಂತೋಷ್ ಸೇಠ್” ಎಂಬಾತನಿಂದ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಣವನ್ನು ಸಿಕಂದರಾಬಾದ್‌ನ ಮೊಂಡಾ ಮಾರುಕಟ್ಟೆಯಲ್ಲಿ ಆಭರಣ ವ್ಯಾಪಾರ ನಡೆಸುತ್ತಿರುವ “ಬಂಟಿ” ಎಂಬ ವ್ಯಕ್ತಿಗೆ ತಲುಪಿಸುವಂತೆ ಸೂಚನೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಣವನ್ನು ಸಾಗಿಸುವುದಕ್ಕಾಗಿ ಆರೋಪಿಗೆ ₹5,000 ನೀಡುವ ಭರವಸೆ ನೀಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ, ಈ ಹಣವು ಆಭರಣ ವ್ಯವಹಾರಕ್ಕೆ ಸಂಬಂಧಿಸಿದ ಹವಾಲಾ ವಹಿವಾಟಿನ ಭಾಗವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ವಿಚಾರಣೆ ವೇಳೆ ಆರೋಪಿಯು ಹಣದ ಮೂಲ, ಮಾಲೀಕತ್ವ ಅಥವಾ ಬಳಸುವ ಉದ್ದೇಶದ ಬಗ್ಗೆ ಯಾವುದೇ ಮಾನ್ಯ ದಾಖಲೆಗಳನ್ನು ನೀಡಲು ವಿಫಲನಾಗಿದ್ದಾನೆ. ಇದರಿಂದ ಅಧಿಕಾರಿಗಳು ಇಬ್ಬರು ಮಧ್ಯವರ್ತಿಗಳ ಸಮ್ಮುಖದಲ್ಲಿ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಆತನ ಮೊಬೈಲ್ ಫೋನ್, ಗುರುತಿನ ದಾಖಲೆಗಳು ಮತ್ತು ರೈಲು ಟಿಕೆಟ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಗೆ ಐಆರ್‌ಪಿ/ಎಸ್‌ಎಚ್‌ಒ ಬಿ. ಸಾಯೀಶ್ವರ್ ಗೌಡ್, ಎಸ್‌ಐ ಟಿ. ಮಾಧವ್ ಹಾಗೂ ಅವರ ತಂಡ ನೇತೃತ್ವ ವಹಿಸಿತ್ತು. ಇವರಿಗೆ ಆರ್‌ಪಿಎಫ್ ಇನ್ಸ್‌ಪೆಕ್ಟರ್‌ಗಳಾದ ಡಿ.ವಿ. ನರಸಿಂಹ ರಾವ್, ಸಂಜೀವ್ ರಾವ್ ಮತ್ತು ಹೈದರಾಬಾದ್ ವಿಭಾಗೀಯ ಸಿಪಿಡಿಎಸ್ ತಂಡ ಸಹಕಾರ ನೀಡಿತ್ತು.
ರೈಲ್ವೆ ಮತ್ತು ರಸ್ತೆ ಸುರಕ್ಷತಾ ಐಜಿಪಿ ಕೆ. ರಮೇಶ್ ನಾಯ್ಡು ಅವರು ಜಿಆರ್‌ಪಿ ಹಾಗೂ ಆರ್‌ಪಿಎಫ್ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.






















