ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಕುರಿತಾದ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಇಂದು ಆಯೋಜಿಸಿದ್ದ ಮಹತ್ವದ ‘ಬ್ರೇಕ್‌ಫಾಸ್ಟ್ ಸಭೆ’ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಉನ್ನತ ಮಟ್ಟದ ಉಪಾಹಾರ ಕೂಟದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಪ್ರಮುಖ ಸಚಿವರುಗಳು ಭಾಗವಹಿಸಿ ಚರ್ಚೆ ನಡೆಸಿದ್ದಾರೆ.
ಈ ಪ್ರಮುಖ ಸಭೆಯಲ್ಲಿ ಡಾ. ಜಿ. ಪರಮೇಶ್ವರ್, ಭೈರತಿ ಸುರೇಶ್, ಸಂತೋಷ್ ಲಾಡ್, ಎಂ.ಸಿ. ಸುಧಾಕರ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಜೆ. ಜಾರ್ಜ್ ಹಾಗೂ ಕೆ. ವೆಂಕಟೇಶ್ ಪಾಲ್ಗೊಂಡಿದ್ದರು. ಹಾಗೇ ಸಚಿವರಾದ ಶಿವರಾಜ್ ತಂಗಡಗಿ, ಎನ್. ಚಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ಶರಣಬಸಪ್ಪ ದರ್ಶನಾಪುರ, ಮಧು ಬಂಗಾರಪ್ಪ, ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ, ಮಂಕಾಳ್ ವೈದ್ಯ, ಆರ್.ಬಿ. ತಿಮ್ಮಾಪುರ್, ಶರಣು ಪ್ರಕಾಶ್ ಪಾಟೀಲ್, ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್, ಈಶ್ವರ್ ಖಂಡ್ರೆ ಮತ್ತು ಎನ್.ಎಸ್. ಬೋಸರಾಜು ಸಿಎಂ ನಿವಾಸಕ್ಕೆ ಆಗಮಿಸಿ ಸಭೆಯಲ್ಲಿ ಉಪಸ್ಥಿತರಿದ್ದರು.
ಕ್ಷಣಮಾತ್ರದಲ್ಲಿ ಗಮನ ಸೆಳೆದ ಡಿಕೆಶಿ ನಡೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳು ಹರಿದಾಡುತ್ತಿರುವ ಸಂದರ್ಭದಲ್ಲೇ ನಡೆದ ಈ ಸಭೆ ಹಲವು ರಾಜಕೀಯ ಆಯಾಮಗಳನ್ನು ಪಡೆದುಕೊಂಡಿದೆ. ಸಭೆಯ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದು ಕಾಲಿಗೆ ಬಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶೀರ್ವಾದ ಪಡೆದರು. ಆ ಬಳಿಕ ಇಬ್ಬರು ನಾಯಕರು ಪರಸ್ಪರ ಆಲಿಂಗಿಸಿಕೊಂಡು ನಗುವಿನೊಂದಿಗೆ ಮಾತುಕತೆ ನಡೆಸಿದ್ದು, ಸಭೆಯ ಪ್ರಮುಖ ಹೈಲೈಟ್ ಆಗಿ ಮೂಡಿಬಂದಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಹಿರಿಯ ನಾಯಕರ ಆಲಿಂಗನವು ಪಕ್ಷದೊಳಗೆ ಎಲ್ಲವೂ ಸುಸೂತ್ರವಾಗಿದೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನವೇ ಎಂಬ ಚರ್ಚೆಗಳು ಆರಂಭವಾಗಿವೆ. ಸರ್ಕಾರದ ಪ್ರಮುಖ ಸಚಿವರ ದಂಡೇ ನೆರೆದಿದ್ದ ಈ ಬ್ರೇಕ್‌ಫಾಸ್ಟ್ ಮೀಟಿಂಗ್, ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದ ಮುಂದಿನ ನಡೆಗಳ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಎಂದು ವಿಶ್ಲೇಷಿಸಲಾಗುತ್ತಿದೆ.





















