SK Home Ad
Home ಕ್ರೀಡೆ IPL 2026: ಪಾಟೀದಾರ್ ಬ್ಯಾಟಿಂಗ್‌ ಅಬ್ಬರಕ್ಕೆ ಬೆಂಡಾದ ಟೈಟನ್ಸ್‌

IPL 2026: ಪಾಟೀದಾರ್ ಬ್ಯಾಟಿಂಗ್‌ ಅಬ್ಬರಕ್ಕೆ ಬೆಂಡಾದ ಟೈಟನ್ಸ್‌

0
236

ಧರ್ಮಶಾಲಾ:‌ ನಾಯಕ ರಜತ್‌ ಪಾಟೀದಾರ್ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗುಜರಾತ್‌ ಟೈಟನ್ಸ್‌ ವಿರುದ್ಧ ಬೃಹತ್‌ ರನ್‌ ಕಲೆಹಾಕಿದೆ.

ಐಪಿಎಲ್‌ ಪಂದ್ಯಾವಳಿಯ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 254 ರನ್‌ ಗಳಿಸಿತು.

ಮೊದಲ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ಶುಭಾರಂಭ ಮಾಡಿ ಆರ್‌ಸಿಬಿ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ವೆಂಕಟೇಶ ಅಯ್ಯರ್‌ (19) ವಿಕೆಟ್‌ ಕಳೆದುಕೊಂಡಿತು.

ಎರಡನೇ ವಿಕೆಟ್‌ಗೆ ವಿರಾಟ್‌ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್‌ ಜೋಡಿ 38 ಎಸೆತದಲ್ಲಿ 72 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಆಧಾರವಾದರು. 9ನೇ ಓವರ್‌ನ ಎರಡನೇ ಎಸೆತದಲ್ಲಿ ಕೊಹ್ಲಿ (43) ಕಟ್‌ ಆಂಡ್‌ ಬೋಲ್ಡ್‌ ಆಗಿ ಹೊರನಡೆದರು.

ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕೊಹ್ಲಿ ಹಿಂದೆಯೇ ಪಡಿಕ್ಕಲ್‌ (30) ಕೂಡ ವಿಕೆಟ್‌ ಕೀಪರ್‌ ಬಟ್ಲರ್‌ಗೆ ಕ್ಯಾಚ್‌ ಕೊಟ್ಟು ಔಟಾದರು.

ನಾಲ್ಕನೇ ವಿಕೆಟ್‌ಗೆ ನಾಯಕ ರಜತ್‌ ಪಾಟೀದಾರ್‌ ಮತ್ತು ಕೃನಾಲ್‌ ಪಾಂಡ್ಯ ಗುಜರಾತ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಕೇವಲ 45 ಎಸೆತದಲ್ಲಿ 95 ರನ್‌ಗಳ ಜತೆಯಾಟ ನಡೆಸಿದಾಗ ಕೃನಾಲ್‌ ಪಾಂಡ್ಯ (43) ರಬಾಡಾಗೆ ವಿಕೆಟ್‌ ಒಪ್ಪಿಸಿದರು.

ಟೀಮ್‌ ಡೇವಿಡ್‌ ಕೇವಲ 4 ರನ್‌ಗಳಿಸಿ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಒಂದಡೆ ವಿಕೆಟ್‌ ಉರುಳುತ್ತಿದ್ದರೂ ಕೂಡ ರಜತ್‌ ಇನ್ನೊಂದು ತುದಿಯಲ್ಲಿ ನಿಂತು ಸ್ಫೋಟಕ ಬ್ಯಾಟಿಂಗ್‌ ನಡೆಸಿ ಕೇವಲ 33 ಎಸೆತದಲ್ಲಿ 5 ಬೌಂಡರಿ, 9 ಸಿಕ್ಸರ್‌ನಿಂದ ಅಜೇಯ 93 ರನ್‌ ಗಳಿಸಿ ತಂಡವನ್ನು ಬೃಹತ್‌ ಮೊತ್ತದತ್ತ ಕೊಂಡೊಯ್ದರು.

ಗುಜರಾತ್‌ ಟೈಟನ್ಸ್‌ ಪರ ಜೇಸನ್ ಹೋಲ್ಡರ್ 39ಕ್ಕೆ 2, ಕಗಿಸೊ ರಬಾಡ 54ಕ್ಕೆ 2 ವಿಕೆಟ್‌ ಪಡೆದರೆ, ಪ್ರಸಿದ್ಧ್ ಕೃಷ್ಣ 34ಕ್ಕೆ ಒಂದು ವಿಕೆಟ್‌ ಉರುಳಿಸಿದರು.