ಬೆಂಗಳೂರು: IPL2026ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯದ ವೇಳೆ ಉಂಟಾದ ವಿವಾದ ಇದೀಗ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ ಕುಟುಂಬದ ಬಾಗಿಲು ತಟ್ಟಿದೆ. ಪಂದ್ಯದ ಮುಕ್ತಾಯದ ನಂತರ ವಿರಾಟ್ ಕೊಹ್ಲಿ ಟ್ರಾವಿಸ್ ಹೆಡ್‌ಗೆ ಹಸ್ತಲಾಘವ (Handshake) ನಿರಾಕರಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ, ಕೊಹ್ಲಿ ಅಂಧ ಅಭಿಮಾನಿಗಳು ಹೆಡ್ ಪತ್ನಿ ಜೆಸ್ಸಿಕಾರನ್ನು ಗುರಿಯಾಗಿಸಿ ಆನ್‌ಲೈನ್‌ನಲ್ಲಿ ತೀವ್ರ ನಿಂದನೆ ಹಾಗೂ ಬೆದರಿಕೆಗಳನ್ನು ಹಾಕುತ್ತಿದ್ದಾರೆ.
ಈ ಕುರಿತು ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಜೆಸ್ಸಿಕಾ, “2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ನಡೆದಿದ್ದ ನಿಂದನೆಯೇ ಈಗ ಮತ್ತೆ ಮರುಕಳಿಸಿದೆ. ಕ್ರೀಡೆಯಲ್ಲಿ ಆವೇಶ ಸಹಜ, ಆದ್ರೆ ಆಟದ ಹಿಂದೆ ನಿಜವಾದ ಮನುಷ್ಯರು ಮತ್ತು ಕುಟುಂಬ ಇರುತ್ತದೆ ಎಂಬುದನ್ನು ಮರೆಯಬಾರದು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮಗಾಗುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ಕ್ರೀಡಾಲೋಕದಲ್ಲಿ ಗಂಭೀರ ಚರ್ಚೆಯಾಗಬೇಕಿದೆ ಎಂದು ಜೆಸ್ಸಿಕಾ ಒತ್ತಾಯಿಸಿದ್ದಾರೆ.
ವಿವಾದದ ಹಿನ್ನೆಲೆ: ಪಂದ್ಯದ ವೇಳೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದ ಹೆಡ್‌ಗೆ ಬೌಲಿಂಗ್ ಮಾಡುವಂತೆ ಕೊಹ್ಲಿ ಸವಾಲು ಹಾಕಿದ್ದರು ಎನ್ನಲಾಗಿದೆ. ಮೈದಾನದ ಈ ಆಕ್ರಮಣಶೀಲತೆ ಪಂದ್ಯ ಮುಗಿದ ನಂತರವೂ ಮುಂದುವರಿದು, ಕೊಹ್ಲಿ ಹಸ್ತಲಾಘವ ನಿರಾಕರಿಸುವ ಹಂತಕ್ಕೆ ತಲುಪಿತ್ತು. ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, “ಮೈದಾನದ ವಾಗ್ವಾದಗಳು ಸಹಜ, ಆದ್ರೆ ಪಂದ್ಯದ ಬಳಿಕ ಹಸ್ತಲಾಘವ ನಿರಾಕರಿಸಿದ್ದನ್ನು ತಪ್ಪಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಎರಡೂ ತಂಡಗಳು ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿವೆ. ಮೇ 26ರ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ಎದುರಿಸಲಿದ್ದರೆ, ಮೇ 27ರ ಎಲಿಮಿನೇಟರ್‌ನಲ್ಲಿ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದೆ. ಇವೆರಡೂ ತಂಡಗಳು ಟೂರ್ನಿಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿದೆ.






















