RBI ವಾರ್ಷಿಕ ಆದಾಯದಲ್ಲಿ 26% ಏರಿಕೆ: ಬ್ಯಾಲೆನ್ಸ್ ಶೀಟ್ ₹91.97 ಲಕ್ಷ ಕೋಟಿಗೆ ವಿಸ್ತರಣೆ – ₹1.09 ಲಕ್ಷ ಕೋಟಿ ಅಪಾಯ ಬಫರ್‌ಗೆ ವರ್ಗಾವಣೆ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ 2025-26 ಹಣಕಾಸು ವರ್ಷದ ಲೆಕ್ಕಪತ್ರಗಳ ಪರಿಶೀಲನೆಯ ಬಳಿಕ ಕೇಂದ್ರ ಸರ್ಕಾರಕ್ಕೆ ₹2,86,588.46 ಕೋಟಿ ಹೆಚ್ಚುವರಿಯನ್ನು ಲಾಭಾಂಶವಾಗಿ ವರ್ಗಾಯಿಸಲು ಅನುಮೋದನೆ ನೀಡಿದೆ. ಈ ಕುರಿತು ಆರ್‌ಬಿಐ ಕೇಂದ್ರೀಯ ನಿರ್ದೇಶಕರ ಮಂಡಳಿ ಶುಕ್ರವಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ಮುಂಬೈನಲ್ಲಿ ನಡೆದ ಆರ್‌ಬಿಐನ 623ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ದೇಶೀಯ ಹಾಗೂ ಜಾಗತಿಕ ಆರ್ಥಿಕ ಪರಿಸ್ಥಿತಿ, ಬ್ಯಾಂಕಿನ ಆರ್ಥಿಕ ಕಾರ್ಯಕ್ಷಮತೆ ಮತ್ತು ಅಪಾಯ ನಿರ್ವಹಣೆಯ ಅಗತ್ಯಗಳನ್ನು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 5 ದಿನ ಬ್ಯಾಂಕ್ ಬಂದ್ ಸಾಧ್ಯತೆ – ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ
ಅಪಾಯ ಬಫರ್‌ಗೆ ₹1.09 ಲಕ್ಷ ಕೋಟಿ : ಮಂಡಳಿ ಸಭೆಯಲ್ಲಿ ಅನಿಶ್ಚಿತ ಅಪಾಯ ಬಫರ್ (Contingent Risk Buffer – CRB) ಗೆ FY26ರಲ್ಲಿ ₹1,09,379.64 ಕೋಟಿ ವರ್ಗಾಯಿಸಲು ನಿರ್ಧರಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ಮೊತ್ತ ₹44,861.70 ಕೋಟಿಯಾಗಿತ್ತು.
ಪರಿಷ್ಕೃತ ಆರ್ಥಿಕ ಬಂಡವಾಳ ಚೌಕಟ್ಟಿನ (Economic Capital Framework – ECF) ಅನ್ವಯ, ಆರ್‌ಬಿಐ ತನ್ನ ಬ್ಯಾಲೆನ್ಸ್ ಶೀಟ್ ಗಾತ್ರದ 4.5ರಿಂದ 7.5 ಶೇಕಡಾ ಮಟ್ಟದಲ್ಲಿ CRB ನಿರ್ವಹಿಸಲು ಅವಕಾಶ ಹೊಂದಿದೆ. ಪ್ರಸ್ತುತ CRB ಅನ್ನು 6.5 ಶೇಕಡಾ ಮಟ್ಟದಲ್ಲಿ ಉಳಿಸಲು ಮಂಡಳಿ ಒಪ್ಪಿಗೆ ನೀಡಿದೆ.
ಆದಾಯದಲ್ಲಿ ಗಣನೀಯ ಏರಿಕೆ: 2025-26ರಲ್ಲಿ ಆರ್‌ಬಿಐನ ಒಟ್ಟು ಆದಾಯ ಹಿಂದಿನ ವರ್ಷಕ್ಕೆ ಹೋಲಿಸಿದರೆ 26.42 ಶೇಕಡಾ ಏರಿಕೆಯಾಗಿದೆ. ಇದೇ ವೇಳೆ ಅಪಾಯ ನಿಬಂಧನೆಗಳ ಮೊದಲು ಬ್ಯಾಂಕಿನ ವೆಚ್ಚಗಳು 27.6 ಶೇಕಡಾ ಹೆಚ್ಚಳ ಕಂಡಿವೆ. ಅಪಾಯ ನಿಬಂಧನೆ ಮತ್ತು ಶಾಸನಬದ್ಧ ನಿಧಿಗಳಿಗೆ ವರ್ಗಾವಣೆಯ ಮೊದಲು ನಿವ್ವಳ ಆದಾಯ FY26ರಲ್ಲಿ ₹3,95,972.10 ಕೋಟಿಯಾಗಿದ್ದು, FY25ರಲ್ಲಿ ಇದು ₹3,13,455.77 ಕೋಟಿಯಾಗಿತ್ತು ಎಂದು ಆರ್‌ಬಿಐ ಮಾಹಿತಿ ನೀಡಿದೆ.
ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ
ಬ್ಯಾಲೆನ್ಸ್ ಶೀಟ್ ವಿಸ್ತರಣೆ : ಮಾರ್ಚ್ 31, 2026ರ ವೇಳೆಗೆ ಆರ್‌ಬಿಐನ ಬ್ಯಾಲೆನ್ಸ್ ಶೀಟ್ 20.61 ಶೇಕಡಾ ವಿಸ್ತರಿಸಿ ₹91,97,121.08 ಕೋಟಿಗೆ ತಲುಪಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ದೇಶೀಯ ಆರ್ಥಿಕ ಚಟುವಟಿಕೆಗಳ ನಡುವೆ ಆರ್‌ಬಿಐ ತನ್ನ ಹಣಕಾಸು ಸ್ಥಿರತೆಯನ್ನು ಬಲಪಡಿಸಿಕೊಂಡಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.
ಕೇಂದ್ರಕ್ಕೆ ಲಾಭವೇನು? : ಆರ್‌ಬಿಐ ನೀಡುವ ಲಾಭಾಂಶವು ಕೇಂದ್ರ ಸರ್ಕಾರದ ಹಣಕಾಸು ನಿರ್ವಹಣೆಗೆ ಮಹತ್ವದ ನೆರವಾಗುತ್ತದೆ. ಮೂಲಸೌಕರ್ಯ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳು ಮತ್ತು ಹಣಕಾಸು ಕೊರತೆ ನಿಯಂತ್ರಣಕ್ಕೆ ಈ ಹಣ ಬಳಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಮಂಡಳಿ ಸಭೆಯಲ್ಲಿ ಜಾಗತಿಕ ಮತ್ತು ದೇಶೀಯ ಆರ್ಥಿಕ ಪರಿಸ್ಥಿತಿಯ ಸಮಗ್ರ ಪರಿಶೀಲನೆಯೂ ನಡೆದಿದ್ದು, ಭವಿಷ್ಯದ ಅಪಾಯಗಳು ಹಾಗೂ ಆರ್ಥಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.





















