ಚೆನ್ನೈ: ಐಪಿಎಲ್ 2026ರ ಪ್ಲೇಆಫ್ ಹಾದಿ ಈಗ ರೋಚಕ ಘಟ್ಟ ತಲುಪಿದೆ. ಸೋಮವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಇತ್ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧರಿಸುವಲ್ಲಿ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ.
ಪ್ರಸ್ತುತ ಸಿಎಸ್‌ಕೆ ತಂಡ 12 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಲಕ್ನೋ ವಿರುದ್ಧದ ಕಳೆದ ಪಂದ್ಯದ ಸೋಲು ತಂಡಕ್ಕೆ ಹಿನ್ನಡೆ ತಂದಿದ್ದು, ಟೂರ್ನಿಯಲ್ಲಿ ಜೀವಂತವಾಗಿರಲು ಇಂದು ಗೆಲ್ಲಲೇಬೇಕಾದ ಅನಿವಾರ್ಯತೆ ಋತುರಾಜ್ ಪಡೆಗಿದೆ.
ಅತ್ತ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್, ಇಂದು ಜಯ ಸಾಧಿಸಿದರೆ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಕೇವಲ 86 ರನ್‌ಗೆ ಆಲೌಟ್ ಆಗಿದ್ದ ಪ್ಯಾಟ್ ಕಮಿನ್ಸ್ ಪಡೆ ಇಂದು ಪುಟಿದೇಳುವ ಹಂಬಲದಲ್ಲಿದೆ.
ಚೆಪಾಕ್ ಮೈದಾನವು ಈ ಬಾರಿ ರನ್ ಮಳೆಗೆ ಸಾಕ್ಷಿಯಾಗುತ್ತಿದ್ದು, ಇಲ್ಲಿ ನಡೆದ 6 ಪಂದ್ಯಗಳಲ್ಲಿ 4 ಬಾರಿ ಚೇಸಿಂಗ್ ತಂಡಗಳೇ ಗೆಲುವು ಸಾಧಿಸಿವೆ. ಹೀಗಾಗಿ ಟಾಸ್ ಇಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇತಿಹಾಸದ ಮುಖಾಮುಖಿಯಲ್ಲಿ ಚೆನ್ನೈ 16-8 ಅಂತರದ ಮೇಲುಗೈ ಹೊಂದಿದ್ದರೂ, ಈ ಬಾರಿ ಹೈದರಾಬಾದ್ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ.
ಪ್ಲೇಆಫ್ ಹಾದಿ ಸುಗಮಗೊಳಿಸಲು ಸಿಎಸ್‌ಕೆಗೆ ಮುಂದಿನ ಎರಡೂ ಪಂದ್ಯಗಳ ಗೆಲುವು ಅನಿವಾರ್ಯವಾಗಿದೆ. ಅತ್ತ ಗುಜರಾತ್ ತಂಡವನ್ನು ಮಣಿಸಿರುವ ಕೆಕೆಆರ್ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದು, ಚೆನ್ನೈ ತಂಡದ ಅರ್ಹತೆಯ ಅವಕಾಶ ಶೇ. 28ಕ್ಕೆ ಕುಸಿದಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಗಾಯದ ಕಾರಣ ಪಂದ್ಯಗಳಿಂದ ದೂರವಿರುವ ಎಂ.ಎಸ್. ಧೋನಿ ಇಂದು ಕಣಕ್ಕಿಳಿಯಲಿದ್ದಾರಾ ಎಂಬುದು ಅಭಿಮಾನಿಗಳ ಪಾಲಿಗೆ ದೊಡ್ಡ ಸಸ್ಪೆನ್ಸ್ ಆಗಿದೆ. ಗಾಯದ ಕಾರಣ ಈ ಆವೃತ್ತಿಯ ಪಂದ್ಯಗಳಿಂದ ದೂರವಿರುವ ಎಂ.ಎಸ್. ಧೋನಿ ಮೇ 18ರಂದು ಚೆನ್ನೈನಲ್ಲಿ ನಡೆಯಲಿರುವ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅನಿರೀಕ್ಷಿತವಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಹರ್ಷ ಭೋಗ್ಲೆ ಸುಳಿವು ನೀಡಿದ್ದಾರೆ.























