ನವದೆಹಲಿ: ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲು ಭಾರತ ಚುನಾವಣಾ ಆಯೋಗ ಆದೇಶ ಪ್ರಕಟಿಸಿದೆ.
ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ರಾಜ್ಯಗಳಲ್ಲಿ ಕಷ್ಟಕರವಾದ ಭೂಪ್ರದೇಶ, ಹವಾಮಾನ ಅಡಚಣೆಗಳು ಮತ್ತು ಕಾರ್ಯಾಚರಣೆಯ ಸವಾಲುಗಳು, ವಿಶೇಷವಾಗಿ ಹಿಮಪಾತ ಪೀಡಿತ ಮತ್ತು ಎತ್ತರದ ಪ್ರದೇಶಗಳು ಇರುವುದರಿಂದ ಎಸ್‌ಐಆರ್ ಪ್ರಕ್ರಿಯೆಯನ್ನು ಈ ರಾಜ್ಯಗಳಲ್ಲಿ ಮುಂದೂಡಲಾಗಿದ್ದು, ಈ ಪ್ರದೇಶಗಳಿಗೆ ಪ್ರತ್ಯೇಕ ವೇಳಾಪಟ್ಟಿ ಘೋಷಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಇನ್ನು ಉಳಿದ ರಾಜ್ಯಗಳಾದ ಕರ್ನಾಟಕ, ದೆಹಲಿ, ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಚಂಡೀಗಢ, ತೆಲಂಗಾಣ, ಪಂಜಾಬ್, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್, ನಾಗಾಲ್ಯಾಂಡ್, ತ್ರಿಪುರ, ದಾದರ್ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯುಗಳಲ್ಲಿ ಮೂರನೇ ಹಂತದಲ್ಲಿ ಎಸ್‌ಐಆರ್ ನಡೆಯಲಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಾತನಾಡಿ, ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಮತ್ತು ಅನರ್ಹ ನಮೂದುಗಳನ್ನು ತಡೆಯುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಸುಮಾರು 36.73 ಕೋಟಿ ಮತದಾರರನ್ನು ಈ ಹಂತದಲ್ಲಿ ತಲುಪುವ ಗುರಿ ಹೊಂದಲಾಗಿದ್ದು, ಮರಣ ಹೊಂದಿದವರು, ಶಾಶ್ವತ ವಲಸೆ ಹೋದವರು, ಒಂದಕ್ಕಿಂತ ಹೆಚ್ಚು ಕಡೆ ನಕಲಿ ಹೆಸರನ್ನು ಹೊಂದಿದವರನ್ನು ಪಟ್ಟಿಯಿಂದ ಹೊರಹಾಕಲಾಗುತ್ತದೆ.




















