ಚೆನ್ನೈ: ಉರ್ವಿಲ್ ಪಟೇಲ್ ಸ್ಫೋಟಕ ಅರ್ಧಶತಕದ ನೆರವಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ.
ಲಖನೌ ನೀಡಿದ್ದ 204 ರನ್‌ಗಳ ಗುರಿಯನ್ನು 4 ಎಸೆತಗಳು ಬಾಕಿ ಇರುವಂತೆಯೇ ಚೆನ್ನೈ ತಂಡ ಗೆಲುವಿನ ಗುರಿ ತಲುಪಿತು. ಈ ಮೂಲಕ ಪ್ಲೇ ಆಫ್ ಅರ್ಹತೆಗೆ ಮತ್ತಷ್ಟು ಸನಿಹ ಬಂದಿದೆ.
ಆರಂಭದಲ್ಲಿ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ ಜೋಡಿ 3.4 ಓವರ್‌ಗಳಲ್ಲಿ 45 ರನ್‌ಗಳಿಸಿ ಬೇರ್ಪಟ್ಟಿತು. ಸಂಜು ಕೇವಲ 14 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನಿಂದ 28 ರನ್‌ಗಳಿಸಿ ಔಟಾದರು.
ಎರಡನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ಉರ್ವಿಲ್ ಪಟೇಲ್ ಲಖನೌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಕೇವಲ 23 ಎಸೆತದಲ್ಲಿ 2 ಬೌಂಡರಿ, 8 ಸಿಕ್ಸರ್‌ನಿಂದ 65 ರನ್ ಗಳಿಸಿದರು. ಈ ವೇಳೆ ಶಹಬಾಜ್ ಅಹ್ಮದ್ ಎಸೆತದಲ್ಲಿ ಆವೇಶ್ ಖಾನ್‌ಗೆ ಕ್ಯಾಚ್ ನೀಡಿ ಹೊರನಡೆದರು.
ಈ ಜೋಡಿ ಕೇವಲ 34 ಎಸೆತದಲ್ಲಿ 81 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಸುಸ್ಥಿತಿಗೆ ಕರೆದೊಯ್ಯಿತು. ಇವರ ಹಿಂದೆಯೇ ರುತುರಾಜ್ ಕೂಡ 42 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ಔಟಾದರು.
ಕಾರ್ತಿಕ್ ಶರ್ಮಾ (20) ಮತ್ತು ಡೆವಾಲ್ಡ್ ಬ್ರೆವಿಸ್ (10) ಬಹುಬೇಗನೆ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನಡೆಯಾಯಿತು. ಕೊನೆಯಲ್ಲಿ ಶಿವಂ ದುಬೆ ಪ್ರಶಾಂತ್ ವೀರ್ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು.
ಇದಕ್ಕೂ ಮುನ್ನ ಲಖನೌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ಲೆಕ್ಕಾಚಾರದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ಆರಂಭದಲ್ಲಿ ಜೋಶ್ ಇಂಗ್ಲಿಸ್ ಆರ್ಭಟಕ್ಕೆ ಮಂಕಾಗಿ ಹೋಗಿತ್ತು.
5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 77 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಲಖನೌಗೆ 6ನೇ ಓವರ್‌ನ ಮೊದಲ ಎಸೆತದಲ್ಲಿಯೇ ಅನ್ಶುಲ್ ಕಾಂಬೋಜ್ ಅವರು ಮಿಚೆಲ್ ಮಾರ್ಷ್ (10) ಅವರನ್ನು ಔಟ್ ಮಾಡಿದರು.
ಮತ್ತೆ ಮರು ಓವರ್‌ನಲ್ಲಿಯೇ ನಿಕೋಲಸ್ ಪೂರನ್ (1) ಕೂಡ ನೂರ್ ಅಹ್ಮದ್ ಎಸೆತದಲ್ಲಿ ಸರ್ಫರಾಜ್ ಖಾನ್‌ಗೆ ಕ್ಯಾಚ್ ನೀಡಿ ಹೊರನಡೆದರು. 15 ರನ್‌ಗಳ ಅಂತರದಲ್ಲಿ ಎರಡು ವಿಕೆಟ್ ಕಳೆದುಕೊಂಡು ಲಖನೌ ಆಘಾತಕ್ಕೊಳಗಾಯಿತು.
ಇನ್ನೊಂದೆಡೆ ಜೋಶ್ ಇಂಗ್ಲಿಸ್ ಕೇವಲ 33 ಎಸೆತದಲ್ಲಿ 10 ಬೌಂಡರಿ 6 ಸಿಕ್ಸರ್‌ನಿಂದ 85 ರನ್ ಗಳಿಸಿ ಆರ್ಭಟಿಸುತ್ತಿದ್ದಾಗ ಜೇಮೀ ಓವರ್ಟನ್ ತಮ್ಮ ಮೊದಲ ಎಸೆತದಲ್ಲಿಯೇ ಅವರನ್ನು ಔಟ್ ಮಾಡುವಲ್ಲಿ ಯಶಕಂಡರು.
ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿಯೂ ಕೂಡ ರಿಷಭ ಪಂತ್ ಅವರ ವಿಕೆಟ್ ಉರುಳಿಸುವ ಮೂಲಕ ಓವರ್ಟನ್ ಲಖನೌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.
ಐಡೆನ್ ಮಾರ್ಕ್ರಾಮ್ (6) ಮತ್ತು ಅಕ್ಷತ್ ರಘುವಂಶಿ (18) ಕೂಡ ಬಹುಬೇಗನೆ ಪೆವಿಲಿಯನ್ ಸೇರಿದರು. ಇದರಿಂದಾಗಿ ಲಖನೌ 14.2 ಓವರ್‌ಗಳಲ್ಲಿ 147 ರನ್‌ಗಳಿಗೆ 6 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.
ಹಿಮ್ಮತ್ ಸಿಂಗ್ (17) ಮತ್ತು ಶಹಬಾಜ್ ಅಹಮದ್ ಅಜೇಯ 43 ರನ್‌ಗಳಿಸಿದರು. ಈ ಜೋಡಿ ಉತ್ತಮ ಜತೆಯಾಟವನ್ನು ನಡೆಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿತು.
ಚೆನ್ನೈ ಪರ ಜೇಮೀ ಓವರ್ಟನ್ 36ಕ್ಕೆ 3, ಅನ್ಶುಲ್ ಕಾಂಬೋಜ್ 41ಕ್ಕೆ 2 ನೂರ್ ಅಹ್ಮದ್ 24ಕ್ಕೆ 1 ವಿಕೆಟ್ ಪಡೆದರು.























