ಬೆಂಗಳೂರು: ಬೆನ್ನಿಗೆ ಚೂರಿ ಹಾಕುವ ಬುದ್ಧಿ ಕಾಂಗ್ರೆಸ್‌ನಲ್ಲಿ ರಕ್ತಗತವಾಗಿ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಏನನ್ನಾದರೂ ಮಾಡಬಲ್ಲದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದರು.
ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್‌ನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕು. ಇದಕ್ಕಾಗಿ ಎಲ್ಲರೂ ಒಟ್ಟಾಗಬೇಕು ಎಂದರು.
ಕಾಂಗ್ರೆಸ್ ಕೇವಲ ಅಧಿಕಾರವನ್ನು ಪಡೆಯಬೇಕೆಂಬ ದುರಾಸೆಯನ್ನು ಹೊಂದಿದೆ. ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಎಲ್ಲಡೆ ಸಮಸ್ಯೆ ಇದ್ದೆ ಇದೆ. ಅಧಿಕಾರಕ್ಕಾಗಿ ಬೆನ್ನಿಗೆ ಚೂರಿ ಹಾಕುವ ಕಾಂಗ್ರೆಸ್ ಈಗ ತಮಿಳುನಾಡಿನಲ್ಲೂ ಅದನ್ನೇ ಮಾಡಿದೆ.
ಡಿಎಂಕೆ ಬೆಂಬಲದಿಂದಲೇ 2014ಕ್ಕೂ ಮುನ್ನ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆದರೆ, ಡಿಎಂಕೆ ಕಾಂಗ್ರೆಸ್‌ನ ಕಷ್ಟಕಾಲದಲ್ಲಿಯೂ ಜತೆಯಿತ್ತು. ಈಗ ಅಧಿಕಾರಕ್ಕಾಗಿ ಡಿಎಂಕೆ ಬಿಟ್ಟು ಕಾಂಗ್ರೆಸ್ ಟಿವಿಕೆ ಕೈ ಹಿಡಿದಿದೆ. ಮುಂದೆ ಹೊಸ ಪಕ್ಷಕ್ಕೂ ಕಾಂಗ್ರೆಸ್ ಚೂರಿ ಹಾಕುವ ದಿನ ದೂರವಿಲ್ಲ ಎಂದರು.
ಮಿತ್ರಪಕ್ಷಗಳಿಗೆ ಅಷ್ಟೇ ಅಲ್ಲ, ಮಹಿಳೆಯರಿಗೂ ಕಾಂಗ್ರೆಸ್ ದ್ರೋಹ ಮಾಡಿದೆ. ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ವಿರೋಧ ಮಾಡಿ ಇದರ ವಿರುದ್ಧ ಕೆಲಸ ಮಾಡಿದೆ. ಇಂತಹ ವಿಶ್ವಾಸ ದ್ರೋಹಿ, ಮಹಿಳಾ ವಿರೋಧಿ ಕಾಂಗ್ರೆಸ್‌ನ್ನು ಸೋಲಿಸಿ ಎಂದರು.
ರಾಜ್ಯದಲ್ಲಿ ಕುರ್ಚಿ ಕದನ: ಕಾಂಗ್ರೆಸ್ ಇದ್ದಲ್ಲಿ ಜಗಳ ಇರುತ್ತೆ. ಅದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಮೂರು ವರ್ಷದಿಂದ ಇಲ್ಲಿ ಜನರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು, ಕುರ್ಚಿಗಾಗಿ ಬಡಿದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಎಷ್ಟು ದಿನ ಇರುತ್ತಾರೆ ಎನ್ನುವುದೇ ಗೊತ್ತಿಲ್ಲ. ಮತ್ತೊಬ್ಬರು ಕುಳಿತುಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಸಿಎಂ ಬದಲಾವಣೆ ಕುರಿತು ಮೋದಿ ವ್ಯಂಗ್ಯ ಮಾಡಿದರು.




















