ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಅಂಶಗಳನ್ನು ಈಡೇರುಸುವ ಭರವಸೆ ನೀಡಿದ್ದಾರೆ.
ಮೊದಲ ಭಾಷಣದಲ್ಲಿಯೇ ʼತಮಿಳುನಾಡಿನಲ್ಲಿ ಹೊಸ ಯುಗದ ಆರಂಭ ಇದಾಗಿದೆ. ನಿಜವಾದ, ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯದ ಹೊಸ ಯುಗಾರಂಭವಾಗಿದೆ’ ಎಂದಿದ್ದಾರೆ. ಅಲ್ಲದೇ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಅವರು, 200 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ ಸಹಿ ಹಾಕಿದ್ದಾರೆ.
ನಾನು ಯಾವುದೇ ರಾಜ ಮನೆತನದಿಂದ ಬಂದವನಲ್ಲ, ಜನರೇ ನನ್ನನ್ನು ಆರಿಸಿ ಕಳಿಸಿದ್ದಾರೆ. ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ. ಸುಳ್ಳು ಭರವಸೆ ನೀಡಿ ಮೋಸ ಮಾಡುವುದಿಲ್ಲ ಎಂದರು.
ಇದು ನನ್ನೊಬ್ಬನ ಗೆಲುವು ಅಲ್ಲ, ನಿಮ್ಮೆಲ್ಲರ ಗೆಲುವು. ಇಡೀ ತಮಿಳುನಾಡಿನ ಜನರ ಗೆಲುವು. ನಿಮ್ಮೆಲ್ಲರಿಂದಲೇ ನಾನು ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಸಮಸ್ತ ನಾಡಿನ ಜನತೆಗೆ ಕೋಟಿ ಕೋಟಿ ನಮನಗಳು ಎಂದರು.
ಆರ್ಥಿಕ ದುಸ್ಥಿತಿ: ಹಿಂದಿನ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಖಜಾನೆಯನ್ನು ಖಾಲಿ ಮಾಡಿದೆ. 10 ಲಕ್ಷ ಕೋಟಿ ಸಾಲದ ಹೊರೆಯನ್ನು ಹೊರೆಸಿದ್ದಾರೆ ಎಂದ ಅವರು, ರಾಜ್ಯ ಆರ್ಥಿಕವಾಗಿ ದುಸ್ಥಿತಿಯಲ್ಲಿದೆ. ರಾಜ್ಯದ ಹಣಕಾಸಿನ ಕುರಿತಾಗಿ ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.




















