Home Advertisement
Home ಸುದ್ದಿ ದೇಶ ಪಶ್ಚಿಮ ಬಂಗಾಳ BJP ಸರ್ಕಾರದ ಸಚಿವರ ರಾಜಕೀಯ ಹಿನ್ನೆಲೆ ಏನು?

ಪಶ್ಚಿಮ ಬಂಗಾಳ BJP ಸರ್ಕಾರದ ಸಚಿವರ ರಾಜಕೀಯ ಹಿನ್ನೆಲೆ ಏನು?

0
125

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದ ಇತಿಹಾಸದಲ್ಲಿ ಮಹತ್ವದ ತಿರುವು ಸಂಭವಿಸಿದ್ದು, ಇದೇ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ (BJP) ರಾಜ್ಯದಲ್ಲಿ ಸರ್ಕಾರ ರಚಿಸಿದೆ. ಹಲವು ದಶಕಗಳ ಕಾಲ ಕಮ್ಯುನಿಸ್ಟ್ ಹಾಗೂ ನಂತರ ತೃಣಮೂಲ ಕಾಂಗ್ರೆಸ್ ಪ್ರಭಾವದಲ್ಲಿದ್ದ ಬಂಗಾಳದಲ್ಲಿ ಇದೀಗ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಅವರೊಂದಿಗೆ ಐವರು ಸಚಿವರೂ ಅಧಿಕಾರ ಸ್ವೀಕರಿಸಿದ್ದಾರೆ.

ಹೊಸ ಸರ್ಕಾರದ ಸಚಿವ ಸಂಪುಟದಲ್ಲಿ ದಿಲೀಪ್ ಘೋಷ್, ಅಗ್ನಿಮಿತ್ರಾ ಪೌಲ್, ನಿಶಿತ್ ಪ್ರಾಮಾಣಿಕ್, ಅಶೋಕ್ ಕಿರ್ತನ್ಯ ಹಾಗೂ ಸೇರಿದ್ದಾರೆ.

ದಿಲೀಪ್ ಘೋಷ್ – ಬಂಗಾಳ ಬಿಜೆಪಿ ನಿರ್ಮಾಣದ ಶಿಲ್ಪಿ : ದಿಲೀಪ್ ಘೋಷ್ ಪಶ್ಚಿಮ ಬಂಗಾಳ ಬಿಜೆಪಿ ಸಂಘಟನೆಯ ಪ್ರಮುಖ ಮುಖಗಳಲ್ಲಿ ಒಬ್ಬರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪೂರ್ಣಾವಧಿ ಪ್ರಚಾರಕರಾಗಿ ರಾಜಕೀಯ ಜೀವನ ಆರಂಭಿಸಿದ್ದರು. 2014ರ ಬಳಿಕ ಬಂಗಾಳದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಘೋಷ್, ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಈ ಹಿಂದೆ ಮೇದಿನಿಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. ಬಂಗಾಳದಲ್ಲಿ ಬಿಜೆಪಿ ವಿಸ್ತರಣೆಗೆ ಕಾರಣರಾದ ನಾಯಕರಲ್ಲಿ ಪ್ರಮುಖರೆಂದು ಪರಿಗಣಿಸಲಾಗುತ್ತದೆ.

ಅಗ್ನಿಮಿತ್ರ ಪೌಲ್ – ಫ್ಯಾಷನ್ ಡಿಸೈನರ್‌ನಿಂದ ಸಚಿವೆಯವರೆಗೆ: ಅಗ್ನಿಮಿತ್ರ ಪೌಲ್ ಹೊಸ ಸರ್ಕಾರದ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ. ಫ್ಯಾಷನ್ ಡಿಸೈನ್ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ಅವರು 2019ರಲ್ಲಿ ಬಿಜೆಪಿಗೆ ಸೇರಿದ್ದರು. 2020ರಲ್ಲಿ ಬಂಗಾಳ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ಅವರು ಬಳಿಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. 2021ರಲ್ಲಿ ಅಸನ್ಸೋಲ್ ದಕ್ಷಿಣ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಸಚಿವ ಸ್ಥಾನ ಅಲಂಕರಿಸಿದ್ದಾರೆ.

ನಿತೀಶ್ ಪ್ರಮಾಣಿಕ್ – ಯುವ ನಾಯಕ: ನಿತೀಶ್ ಪ್ರಮಾಣಿಕ್ ಉತ್ತರ ಬಂಗಾಳದ ಬಿಜೆಪಿ ಯುವ ನಾಯಕರಲ್ಲಿ ಪ್ರಮುಖರು. ತೃಣಮೂಲ ಕಾಂಗ್ರೆಸ್ ತೊರೆದು 2019ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅವರು, ಬಳಿಕ ಕೇಂದ್ರದಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಬಂಶಿ ಸಮುದಾಯದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಪ್ರಮಾಣಿಕ್, ಉತ್ತರ ಬಂಗಾಳದಲ್ಲಿ ಪಕ್ಷದ ಬಲವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಶೋಕ್ ಕೀರ್ತಾನಿಯಾ – ಮತುವಾ ಸಮುದಾಯದ ಪ್ರತಿನಿಧಿ: ಅಶೋಕ್ ಕೀರ್ತಾನಿಯಾ ಉತ್ತರ 24 ಪರಗಣಗಳ ಬಂಗಾವ್ ಉತ್ತರ ಕ್ಷೇತ್ರದ ಶಾಸಕರಾಗಿದ್ದಾರೆ. ಮತುವಾ ಸಮುದಾಯದ ಪ್ರಭಾವವಿರುವ ಪ್ರದೇಶದಲ್ಲಿ ಅವರು ಬಿಜೆಪಿಯ ಸಂಘಟನೆ ಬಲಪಡಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಕ್ಷುದಿರಾಮ್ ತುಡು – ಬುಡಕಟ್ಟು ನಾಯಕ: ಕ್ಷುದಿರಾಮ್ ತುಡು ಬಂಕುರಾ ಜಿಲ್ಲೆಯ ಬುಡಕಟ್ಟು ಸಮುದಾಯದ ಪ್ರಮುಖ ನಾಯಕರು. ಜಂಗಲ್ ಮಹಲ್ ಪ್ರದೇಶದಲ್ಲಿ ಬಿಜೆಪಿ ನೆಲೆ ಬಲಪಡಿಸಲು ತುಡು ಪ್ರಮುಖ ಪಾತ್ರವಹಿಸಿದ್ದರು.

ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ : ಬಿಜೆಪಿ ಸರ್ಕಾರ ರಚನೆಯೊಂದಿಗೆ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಹಲವು ವರ್ಷಗಳಿಂದ ಎಡಪಂಥೀಯರು ಹಾಗೂ ತೃಣಮೂಲ ಕಾಂಗ್ರೆಸ್ ಪ್ರಭಾವದಲ್ಲಿದ್ದ ರಾಜ್ಯದಲ್ಲಿ ಇದೀಗ ಬಲಪಂಥೀಯ ಸರ್ಕಾರ ಅಧಿಕಾರಕ್ಕೆ ಬಂದಿರುವುದು ರಾಷ್ಟ್ರೀಯ ರಾಜಕೀಯದಲ್ಲಿಯೂ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.