Home Advertisement
Home ಸುದ್ದಿ ರಾಜ್ಯ ಕನ್ನಡಿಗರ IFS ಸಾಧನೆಗೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರ

ಕನ್ನಡಿಗರ IFS ಸಾಧನೆಗೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರ

0
79

ಬೆಂಗಳೂರು: ಭಾರತೀಯ ಅರಣ್ಯ ಸೇವೆ (IFS) ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಗಳಿಸಿರುವ ಬಸವರಾಜ್ ಕೆಂಪವಾಡ್ ಹಾಗೂ 14ನೇ ರ‍್ಯಾಂಕ್ ಪಡೆದ ದೀಕ್ಷಿತ್.ಎನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಹಂಚಿಕೊಂಡಿರುವ ಮುಖ್ಯಮಂತ್ರಿ, ಇಬ್ಬರು ಕನ್ನಡಿಗರ ಸಾಧನೆಯನ್ನು ರಾಜ್ಯದ ಹೆಮ್ಮೆ ಮತ್ತು ಯುವಕರಿಗೆ ಪ್ರೇರಣೆಯಾದ ಸಾಧನೆ ಎಂದು ಬಣ್ಣಿಸಿದ್ದಾರೆ.

‘ಕಠಿಣ ಗುರಿಯನ್ನೂ ಮುಟ್ಟಬಹುದು’: ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ, “ಪರಿಶ್ರಮ, ಪ್ರಯತ್ನ ಮತ್ತು ಆತ್ಮವಿಶ್ವಾಸವಿದ್ದರೆ ಕಠಿಣಾತಿ ಕಠಿಣ ಗುರಿಯನ್ನು ಕೂಡ ಸಾಧಿಸಬಹುದು ಎಂಬುದಕ್ಕೆ ಇವರ ಸಾಧನೆಯೇ ಸಾಕ್ಷಿ,” ಎಂದು ಹೇಳಿದ್ದಾರೆ. ಬಸವರಾಜ್ ಕೆಂಪವಾಡ್ ದೇಶಕ್ಕೆ ಮೊದಲ ರ‍್ಯಾಂಕ್‌ಗಳಿಸಿರುವುದು ಹಾಗೂ ದೀಕ್ಷಿತ್ ಎನ್ 14ನೇ ರ‍್ಯಾಂಕ್ ಪಡೆದು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿರುವುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ಪರಿಸರ ಸಂರಕ್ಷಣೆಗೆ ಸೇವೆ ಸಲ್ಲಿಸಲಿ : ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂಪನ್ಮೂಲಗಳ ಸಂರಕ್ಷಣೆ ಕ್ಷೇತ್ರದಲ್ಲಿ ಇವರ ಸೇವೆ ರಾಷ್ಟ್ರಕ್ಕೆ ಹೆಚ್ಚಿನ ಉಪಯೋಗವಾಗಲಿ ಎಂದು ಮುಖ್ಯಮಂತ್ರಿ ಹಾರೈಸಿದ್ದಾರೆ. “ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಂಪನ್ಮೂಲಗಳನ್ನು ಉಳಿಸಿ ಬೆಳೆಸುವಲ್ಲಿ ನಿಮ್ಮ ಪ್ರತಿಭೆ ಹಾಗೂ ಶ್ರದ್ಧೆಯಿಂದ ದೇಶಕ್ಕೆ ಗರಿಷ್ಠ ಅನುಕೂಲವಾಗಲಿ,” ಎಂದು ತಮ್ಮ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.

ಕನ್ನಡಿಗರ ಸಾಧನೆಗೆ ಮೆಚ್ಚುಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಈ ಇಬ್ಬರ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಮತ್ತು ಸ್ಪೂರ್ತಿದಾಯಕವಾಗಿದೆ,” ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸೇರಿದಂತೆ ಹಲವು ಗಣ್ಯರು ಬಸವರಾಜ್ ಕೆಂಪವಾಡ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದರು.

ಗ್ರಾಮೀಣ ಹಿನ್ನೆಲೆಯಿಂದ ರಾಷ್ಟ್ರ ಮಟ್ಟದ ಸಾಧನೆ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ರೈತ ಕುಟುಂಬದ ಬಸವರಾಜ್ ಕೆಂಪವಾಡ್, ಸ್ವಯಂ ಅಧ್ಯಯನದ ಮೂಲಕ ಈ ಸಾಧನೆ ಮಾಡಿದ್ದಾರೆ. ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಣ ಪಡೆದ ಅವರು ಯಾವುದೇ ವಿಶೇಷ ಕೋಚಿಂಗ್‌ ಇಲ್ಲದೆ ದೇಶಕ್ಕೆ ಮೊದಲ ಸ್ಥಾನ ಗಳಿಸಿರುವುದು ಯುವಕರಿಗೆ ಹೊಸ ಸ್ಪೂರ್ತಿಯಾಗಿದೆ.

ಇದೇ ವೇಳೆ ದೀಕ್ಷಿತ್ ಎನ್ ಕೂಡ ಉತ್ತಮ ರ‍್ಯಾಂಕ್‌ಗಳಿಸುವ ಮೂಲಕ ಕರ್ನಾಟಕದ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.