Home Advertisement
Home ನಮ್ಮ ಜಿಲ್ಲೆ ಬಳ್ಳಾರಿ ಹಣ ವಸೂಲಿ ಆರೋಪ: ತಮ್ಮದೇ ಗನ್‌ಮ್ಯಾನ್ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳ್ಳಾರಿ SP

ಹಣ ವಸೂಲಿ ಆರೋಪ: ತಮ್ಮದೇ ಗನ್‌ಮ್ಯಾನ್ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳ್ಳಾರಿ SP

0
148

ಬಳ್ಳಾರಿ: ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲೇ ಸಂಚಲನ ಮೂಡಿಸುವ ಬೆಳವಣಿಗೆ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಅವರ ಗನ್‌ಮ್ಯಾನ್ ದೇವರಾಜ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಪಡಿತರ ಅಕ್ಕಿ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯಿಂದ ಹಣ ವಸೂಲಿ ಮಾಡಿದ ಆರೋಪದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಶರಭಯ್ಯ ಎಂಬ ಅಕ್ಕಿ ಸಾಗಾಣೆದಾರ ನೀಡಿದ ದೂರಿನ ಆಧಾರದ ಮೇಲೆ ಮೋಕಾ ಪೋಲಿಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ದೂರು ಪ್ರಕಾರ, ಪಡಿತರ ಅಕ್ಕಿ ತುಂಬಿಕೊಂಡು ಆಂಧ್ರಪ್ರದೇಶದ ಕಡೆಗೆ ತೆರಳುತ್ತಿದ್ದ ಎರಡು ಲಾರಿಗಳನ್ನು ದೇವರಾಜ್ ಮತ್ತು ಆತನ ಸಹಚರರು ಅಡ್ಡಗಟ್ಟಿದ್ದರು. ತಾವು “ಎಸ್ಪಿ ಸ್ಕ್ವಾಡ್” ಎಂದು ಪರಿಚಯಿಸಿಕೊಂಡು, ಪ್ರಕರಣ ದಾಖಲಿಸಿ ಲಾರಿಗಳನ್ನು ಸೀಜ್ ಮಾಡುವುದಾಗಿ ಬೆದರಿಕೆ ಹಾಕಿ ಮೊದಲು ₹5 ಲಕ್ಷ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ನಂತರ ಮಾತುಕತೆಯ ಬಳಿಕ ₹3 ಲಕ್ಷ ಹಣ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಹಣ ನೀಡದಿದ್ದರೆ ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಶರಭಯ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪ ಸತ್ಯವಾಗಿರುವುದು ಕಂಡುಬಂದ ಹಿನ್ನೆಲೆ, ಎಸ್ಪಿ ಸುಮನ್ ಪನ್ನೇಕರ್ ಸ್ವತಃ ಕಠಿಣ ಕ್ರಮ ಕೈಗೊಂಡು ತಮ್ಮದೇ ಗನ್‌ಮ್ಯಾನ್ ದೇವರಾಜ್ ಬಂಧನಕ್ಕೆ ಆದೇಶಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೋಕಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಂದುವರಿದಿದೆ.

ಪ್ರಕರಣದ ಕುರಿತು ಸ್ವತಃ ಎಸ್ಪಿ ಸುಮನ್ ಪನ್ನೇಕರ್ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿರುವುದು ಗಮನಸೆಳೆದಿದೆ. ಅಕ್ರಮ ಪಡಿತರ ಅಕ್ಕಿ ಸಾಗಾಟದ ವಿರುದ್ಧ ಬಳ್ಳಾರಿ ಪೊಲೀಸರು ಕಳೆದ ಕೆಲವು ತಿಂಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ನೂರಾರು ಪ್ರಕರಣಗಳು ದಾಖಲಾಗಿವೆ.

ಆದರೆ ಇದೀಗ ಅದೇ ಕಾರ್ಯಾಚರಣೆಯ ಹೆಸರಿನಲ್ಲಿ ಪೊಲೀಸ್ ಸಿಬ್ಬಂದಿಯೇ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವುದು ಇಲಾಖೆ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಅಧಿಕಾರಿಗಳ ಹೆಸರು ಬಹಿರಂಗವಾಗುವ ಸಾಧ್ಯತೆಯೂ ತಳ್ಳಿಹಾಕಲಾಗುತ್ತಿಲ್ಲ.

ಈ ಘಟನೆ ಜಿಲ್ಲೆಯ ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಶಿಸ್ತು ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಯಾವುದೇ ಮನ್ನಣೆ ಇಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.