ಫುಜೈರಾದಲ್ಲಿ ದಾಳಿ ಪರಿಣಾಮ: UAE ಪ್ರತಿಕ್ರಿಯೆ ಎಚ್ಚರಿಕೆ, ಭಾರತ ಶಾಂತಿಯ ಕರೆ
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಲ್ಲಿ ಮೂವರು ಭಾರತೀಯರು ಗಾಯಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಫುಜೈರಾ ಪ್ರದೇಶದಲ್ಲಿ ನಡೆದ ದಾಳಿಯ ನಂತರ ಗಾಯಗೊಂಡ ಭಾರತೀಯರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ.
ಈ ದಾಳಿಗಳನ್ನು ಇರಾನ್ ನಡೆಸಿದ “ಅಪ್ರಚೋದಿತ ಆಕ್ರಮಣ” ಎಂದು ಯುಎಇ ಆರೋಪಿಸಿದ್ದು, ದೇಶದ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಇದು ನೇರ ಬೆದರಿಕೆ ಎಂದು ಹೇಳಿದೆ. ಯುಎಇ ವಿದೇಶಾಂಗ ಸಚಿವಾಲಯ ಕಠಿಣ ಪದಗಳಲ್ಲಿ ಪ್ರತಿಕ್ರಿಯೆ ನೀಡಿ, ಇಂತಹ ಕ್ರಮಗಳು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆ ಚಾರ್ಟರ್ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿದೆ.
ಯುಎಇ ತನ್ನ ಸಾರ್ವಭೌಮತ್ವಕ್ಕೆ ಯಾವುದೇ ಬೆದರಿಕೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಅಗತ್ಯವಿದ್ದಲ್ಲಿ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಪ್ರತಿಕ್ರಿಯಿಸುವ ಹಕ್ಕು ಹೊಂದಿದೆ ಎಂದು ತಿಳಿಸಿದೆ.
ಇದರ ಮಧ್ಯೆ, ಯುಎಇ ರಕ್ಷಣಾ ಸಚಿವಾಲಯದ ಪ್ರಕಾರ ಇರಾನ್‌ನಿಂದ ನಾಲ್ಕು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಲಾಗಿದ್ದು, ವಾಯು ರಕ್ಷಣಾ ವ್ಯವಸ್ಥೆಗಳು ಮೂರನ್ನು ಯಶಸ್ವಿಯಾಗಿ ತಡೆದಿವೆ. ಇನ್ನೊಂದು ಕ್ಷಿಪಣಿ ಸಮುದ್ರಕ್ಕೆ ಬಿದ್ದಿದೆ. ದೇಶದ ಹಲವು ಭಾಗಗಳಲ್ಲಿ ಕೇಳಿಬಂದ ಭಾರಿ ಸದ್ದುಗಳು ಈ ಪ್ರತಿಬಂಧಕ ಕ್ರಮಗಳಿಂದಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
NCEMA ನಿವಾಸಿಗಳಿಗೆ ಮನೆಯಲ್ಲಿ ಇರುವಂತೆ, ಅಧಿಕೃತ ಮಾಹಿತಿ ಅನುಸರಿಸುವಂತೆ ಹಾಗೂ ಸ್ಫೋಟಕ ಅವಶೇಷಗಳಿಗೆ ಹತ್ತಿರ ಹೋಗದಂತೆ ಎಚ್ಚರಿಕೆ ನೀಡಿದೆ.
ಇತ್ತ ಭಾರತದ ವಿದೇಶಾಂಗ ಸಚಿವಾಲಯ ಕೂಡ ಘಟನೆಯನ್ನು ಖಂಡಿಸಿ, ನಾಗರಿಕರ ಮೇಲೆ ದಾಳಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ತಕ್ಷಣವೇ ಹಿಂಸಾಚಾರ ನಿಲ್ಲಿಸಿ, ಸಂವಾದ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆ ಪರಿಹರಿಸಬೇಕೆಂದು ಭಾರತ ಕರೆ ನೀಡಿದೆ. ಜೊತೆಗೆ, ಹಾರ್ಮುಜ್ ಜಲಸಂಧಿ ಮೂಲಕ ಮುಕ್ತ ಮತ್ತು ಅಡೆತಡೆಯಿಲ್ಲದ ಸಂಚಾರ ಹಾಗೂ ವಾಣಿಜ್ಯ ಮುಂದುವರಿಯಬೇಕು ಎಂದು ಒತ್ತಾಯಿಸಿದೆ.
ಪಶ್ಚಿಮ ಏಷ್ಯಾದ ಈ ಉದ್ವಿಗ್ನ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಹೇಗೆ ತಿರುಗುತ್ತದೆ ಎಂಬುದು ಜಾಗತಿಕ ಗಮನ ಸೆಳೆಯುತ್ತಿದೆ.























