Home Advertisement
Home ಕ್ರೀಡೆ IPL 2026: ಜಯದ ಹಳಿಗೆ ಮರಳಿದ ಡೆಲ್ಲಿ ಕ್ಯಾಪಿಟಲ್ಸ್

IPL 2026: ಜಯದ ಹಳಿಗೆ ಮರಳಿದ ಡೆಲ್ಲಿ ಕ್ಯಾಪಿಟಲ್ಸ್

0
6

ಜೈಪುರ: ನಿಸ್ಸಾಂಕ ಮತ್ತು ಕೆ.ಎಲ್‌. ರಾಹುಲ್‌ ಅವರ ಉತ್ತಮ ಬ್ಯಾಟಿಂಗ್‌ ನೆರವಿನಿಂದಾಗಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಸುಲಭ ಜಯ ಸಾಧಿಸಿತು.

ರಾಜಸ್ಥಾನ ರಾಯಲ್ಸ್‌ ನೀಡಿದ್ದ 226 ರನ್‌ಗಳ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ 19.1 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ 7 ವಿಕೆಟ್‌ಗಳ ಜಯ ಸಾಧಿಸಿತು.

ಡೆಲ್ಲಿ ಪರ ಆರಂಭಿಕ ಆಟಗಾರ ನಿಸ್ಸಾಂಕ (62) ಮತ್ತು ಕೆ.ಎಲ್‌. ರಾಹುಲ್‌ (75) ಜೋಡಿ 9.3 ಓವರ್‌ಗಳಲ್ಲಿಯೇ ಮೊದಲ ವಿಕೆಟ್‌ಗೆ 110 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತು.

ಎರಡನೇ ವಿಕೆಟ್‌ಗೆ ರಾಹುಲ್‌ ಜತೆಯಾದ ನಿತೀಶ್ ರಾಣಾ 61 ರನ್‌ಗಳ ಜತೆಯಾಟ ನಡೆಸಿ 33 ರನ್‌ ಗಳಿಸಿ ತುಷಾರ್‌ ದೇಶಪಾಂಡೆಗೆ ವಿಕೆಟ್‌ ಒಪ್ಪಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ರಾಹುಲ್‌ ಕೂಡ ಮರು ಓವರ್‌ನಲ್ಲಿಯೇ ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಯಾಚ್‌ ನೀಡಿ ಹೊರನಡೆದರು.

ಆಗ ತಂಡದ ಗೆಲುವಿಗೆ 28 ಎಸೆತಗಳಲ್ಲಿ 49 ರನ್‌ಗಳು ಅವಶ್ಯವಿದ್ದವು. ಟ್ರಿಸ್ಟಾನ್ ಸ್ಟಬ್ಸ್ (18) ಮತ್ತು ಅಶುತೋಷ್ ಶರ್ಮಾ (25) ಜೋಡಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲ ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 225 ರನ್‌ ಗಳಿಸಿತು.

ಇನ್ನಿಂಗ್ಸ್‌ ಆರಂಭದಲ್ಲಿಯೇ ರಾಜಸ್ಥಾನ್‌ ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್‌ನಲ್ಲಿಯೇ ಯಶಸ್ವಿ ಜೈಸ್ವಾಲ್‌ (6) ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಅವರಿಗೆ ಕ್ಯಾಚ್‌ ಕೊಟ್ಟು ಔಟಾದರು.

ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿದ್ದ ಸ್ಫೋಟಕ ಬ್ಯಾಟರ್‌ ವೈಭವ್‌ ಸೂರ್ಯವಂಶಿ (4) ಕೂಡ ಎರಡನೇ ಓವರ್‌ನಲ್ಲಿಯೇ ಕೈಲ್ ಜೇಮಿಸನ್‌ಗೆ ವಿಕಟ್‌ ಒಪ್ಪಿಸಿ ಹೊರನಡೆದರು.

ಮೂರನೇ ವಿಕೆಟ್‌ಗೆ ಜತೆಯಾದ ಧ್ರುವ್ ಜುರೆಲ್ ಮತ್ತು ರಿಯಾನ್ ಪರಾಗ್ ಜೋಡಿ 102 ರನ್‌ಗಳ ಜತೆಯಾಟ ನಡೆಸಿ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ದರು. ಈ ವೇಳೆ ಧ್ರುವ್ 42 ರನ್‌ ಗಳಿಸಿ ಔಟಾದರು.

ರಿಯಾನ್ ಪರಾಗ್ ಜತೆಯಾದ ರವೀಂದ್ರ ಜಡೇಜಾ 53 ರನ್‌ಗಳ ಜತೆಯಾಟ ನಡೆಸಿದರು. ಇದರಲ್ಲಿ ಕೇವಲ 20 ರನ್‌ ಕಾಣಿಕೆ ನೀಡಿದರು. ಶತಕದ ಹೊಸ್ತಿಲಲ್ಲಿದ್ದ ನಾಯಕ ರಿಯಾನ್ ಪರಾಗ್ ಮತ್ತು ಜಡೇಜಾ ಇಬ್ಬರೂಮಿಚೆಲ್ ಸ್ಟಾರ್ಕ್ ಅವರ ಒಂದೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ಬಳಿಕ ಕ್ರಿಸ್‌ಗೆ ಬಂದ ಡೊನೊವನ್ ಫೆರೀರಾ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದು, ಕೇವಲ 14 ಎಸೆತದಲ್ಲಿ 2 ಬೌಂಡರಿ, 6 ಸಿಕ್ಸರ್‌ನಿಂದ ಅಜೇಯ 47 ರನ್‌ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.