ತೆಲಂಗಾಣ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಕೆ. ಕವಿತಾ ಅವರು ಪ್ರಾರಂಭಿಸಿದ ಹೊಸ ರಾಜಕೀಯ ಪಕ್ಷಕ್ಕೆ ‘ತೆಲಂಗಾಣ ರಕ್ಷಣಾ ಸೇನಾ (ಟಿಆರ್‌ಎಸ್)’ ಎಂಬ ಹೆಸರನ್ನು ಭಾರತಿಯ ಚುನಾವಣಾ ಆಯೋಗ ಅನುಮೋದಿಸಿದೆ. ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ದೃಢಪಡಿಸಿದ್ದಾರೆ.
ಹೆಸರಿನ ಹಿಂದೆ ರಾಜಕೀಯ ಸಂದೇಶ : ಪಕ್ಷದ ಉದ್ಘಾಟನೆಯ ವೇಳೆ ಕವಿತಾ ಅವರು ‘ತೆಲಂಗಾಣ ರಾಷ್ಟ್ರ ಸೇನಾ’ ಎಂಬ ಹೆಸರನ್ನು ಪ್ರಸ್ತಾಪಿಸಿದ್ದರೂ, ಚುನಾವಣಾ ಆಯೋಗವು ‘ಟಿಆರ್‌ಎಸ್’ ಎಂಬ ಮೊದಲಕ್ಷರಗಳನ್ನು ಉಳಿಸಿಕೊಂಡಿದೆ. ಈ ಹೆಸರಿನ ಆಯ್ಕೆ ತೆಲಂಗಾಣ ರಾಜಕೀಯದಲ್ಲಿ ಮಹತ್ವದ ಸಂಕೇತವೆಂದು ವಿಶ್ಲೇಷಿಸಲಾಗುತ್ತಿದೆ.
ಕವಿತಾ ಅವರ ತಂದೆ ಕೆ. ಚಂದ್ರಶೇಖರ ರಾವ್ ಅವರು ಸ್ಥಾಪಿಸಿದ್ದ ‘ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)’ ನಂತರ ‘Bharat Rashtra Samithi (ಬಿಆರ್‌ಎಸ್)’ ಎಂದು ಮರುನಾಮಕರಣಗೊಂಡಿತ್ತು. ಈಗ ಅದೇ ಟಿಆರ್‌ಎಸ್ ಮೊದಲಕ್ಷರಗಳನ್ನು ಕವಿತಾ ತಮ್ಮ ಹೊಸ ಪಕ್ಷದಲ್ಲಿ ಉಳಿಸಿಕೊಂಡಿರುವುದು ರಾಜಕೀಯವಾಗಿ ಗಮನ ಸೆಳೆಯುತ್ತಿದೆ.
BRSನಿಂದ ಬೇರ್ಪಟ್ಟು ಹೊಸ ಹೆಜ್ಜೆ: ಬಿಆರ್‌ಎಸ್ ಪಕ್ಷದಿಂದ ಬೇರ್ಪಟ್ಟ ಏಳು ತಿಂಗಳ ನಂತರ, ಏಪ್ರಿಲ್ 25ರಂದು ಮೆಡ್ಚಲ್‌ನಲ್ಲಿ ನಡೆದ ಭಾರೀ ಸಮಾವೇಶದಲ್ಲಿ ಕವಿತಾ ತಮ್ಮ ಹೊಸ ಪಕ್ಷವನ್ನು ಘೋಷಿಸಿದರು. ಈ ವೇಳೆ, “ಟಿಆರ್‌ಎಸ್ ಹೆಸರಿಗಾಗಿ ನಾವು 20 ವರ್ಷಗಳ ಕಾಲ ಹೋರಾಟ ನಡೆಸಿದ್ದೇವೆ. ತೆಲಂಗಾಣ ರಾಜ್ಯ ಸಾಧನೆಯಲ್ಲಿ ಈ ಹೆಸರಿನ ಪಾತ್ರ ಮಹತ್ತರ” ಎಂದು ಅವರು ಹೇಳಿದರು.
ಬಿಆರ್‌ಎಸ್ ಮತ್ತು ಕಾಂಗ್ರೆಸ್ ವಿರುದ್ಧ ಟೀಕೆ : ಕವಿತಾ ತಮ್ಮ ಹಿಂದಿನ ಪಕ್ಷ ಬಿಆರ್‌ಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಟೀಕಿಸಿದರು. “ಯುವಕರು ಮತ್ತು ರೈತರ ಆಕಾಂಕ್ಷೆಗಳು ಈಡೇರಿಲ್ಲ. ಕಳೆದ 10 ವರ್ಷಗಳ ಬಿಆರ್‌ಎಸ್ ಆಡಳಿತದಲ್ಲಾಗಲಿ, ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಆಗಲಿ ಜನರ ನಿರೀಕ್ಷೆಗಳು ಈಡೇರಿಲ್ಲ” ಎಂದು ಅವರು ಆರೋಪಿಸಿದರು.
ಪ್ರಾದೇಶಿಕ ವಿಷಯಗಳಿಗೆ ಆದ್ಯತೆ: ಹೊಸದಾಗಿ ಆರಂಭಿಸಿದ ಟಿಆರ್‌ಎಸ್ ಪಕ್ಷವು ಪ್ರಮುಖವಾಗಿ ಪ್ರಾದೇಶಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲಿದೆ ಎಂದು ಕವಿತಾ ಹೇಳಿದರು. “ನಮ್ಮ ಪಕ್ಷದ 95% ಗಮನ ತೆಲಂಗಾಣದ ಸಮಸ್ಯೆಗಳ ಮೇಲೆ ಇರುತ್ತದೆ. ಒಬಿಸಿ 50% ಮೀಸಲಾತಿ ನಮ್ಮ ಪ್ರಮುಖ ಅಜೆಂಡಾಗಳಲ್ಲೊಂದು” ಎಂದು ಅವರು ಹೇಳಿದರು.




















