Home Advertisement
Home ನಮ್ಮ ಜಿಲ್ಲೆ ಕೋಲಾರ ಅಂಬುಲೆನ್ಸ್‌ನಲ್ಲಿ ಬಂದು SSLC ಬರೆದ ಕುಸುಮಾ ಫಸ್ಟ್ ಕ್ಲಾಸ್ ಪಾಸ್

ಅಂಬುಲೆನ್ಸ್‌ನಲ್ಲಿ ಬಂದು SSLC ಬರೆದ ಕುಸುಮಾ ಫಸ್ಟ್ ಕ್ಲಾಸ್ ಪಾಸ್

0
118

ಕೋಲಾರ: ದುರ್ಘಟನೆ, ನೋವು, ಆಸ್ಪತ್ರೆ—ಇವೆಲ್ಲವನ್ನೂ ಮೀರಿ ಶಿಕ್ಷಣದತ್ತ ತೊಡಗಿಕೊಂಡ ವಿದ್ಯಾರ್ಥಿನಿಯೊಬ್ಬಳ ಕಥೆ ಇದೀಗ ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿಯ ವಿದ್ಯಾರ್ಥಿನಿ ಕುಸುಮಾ, ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದರೂ ಛಲ ಬಿಡದೆ ಸ್ಟ್ರೆಚರ್‌ನಲ್ಲೇ ಬಂದು SSLC ಪರೀಕ್ಷೆ ಬರೆದು ಇದೀಗ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕುಸುಮಾ ಸದ್ಯ ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ ಒಂದು ವಾರದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ದೇಹದ ನೋವಿನ ನಡುವೆಯೂ ಶಿಕ್ಷಣದ ಮೇಲೆ ಇದ್ದ ಸಂಕಲ್ಪದಿಂದ, ಅಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಟ್ರೆಚರ್‌ನಲ್ಲೇ ಮಲಗಿ ಪರೀಕ್ಷೆ ಬರೆದಿದ್ದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕುಸುಮಾ 625ಕ್ಕೆ 374 ಅಂಕಗಳನ್ನು ಗಳಿಸಿ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಕೇವಲ ಅಂಕಗಳ ಸಾಧನೆ ಮಾತ್ರವಲ್ಲ, ಮನೋಬಲದ ಗೆಲುವು ಕೂಡ ಆಗಿದೆ.

ಸಂಕಷ್ಟದಲ್ಲಿ ಸಾಧನೆ : ಅಪಘಾತದ ಬಳಿಕ ಸಾಮಾನ್ಯ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗುವುದು ಸವಾಲಾಗಿದ್ದರೂ, ಕುಸುಮಾ ಅದನ್ನು ಸವಾಲಾಗಿ ಸ್ವೀಕರಿಸಿ ಎದುರಿಸಿದ್ದಾರೆ. ತಾಯಿ ಹಾಗೂ ಶಿಕ್ಷಣ ಇಲಾಖೆಯ ಸಹಕಾರದಿಂದ ಪರೀಕ್ಷಾ ಕೇಂದ್ರಕ್ಕೆ ತಲುಪಿದ ಅವರು, ವೈದ್ಯಕೀಯ ನೆರವಿನ ನಡುವೆಯೇ ತಮ್ಮ ಗುರಿಯನ್ನು ಸಾಧಿಸಿದ್ದಾರೆ.

ಸಹಾಯ ಹಸ್ತ : ಕುಸುಮಾ ಅವರ ಈ ಪ್ರಯತ್ನಕ್ಕೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಹಲವರು ನೆರವಾಗಿದ್ದಾರೆ. ವಿಶೇಷವಾಗಿ ಮಾಜಿ ಶಿಕ್ಷಣ ಸಚಿವ ಸುರೇಶ ಕುಮಾರ್‌ ಅವರು ಕುಸುಮಾ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದು, ಚಿಕಿತ್ಸೆಗಾಗಿ ನೆರವು ಒದಗಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಆರ್ಥಿಕ ಸಹಾಯ ದೊರೆತಿದೆ.

ಕುಸುಮಾ ಅವರ ಸಾಧನೆ ಇದೀಗ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, “ಸಂಕಷ್ಟ ಬಂದರೂ ಶಿಕ್ಷಣದ ದಾರಿ ಬಿಡಬಾರದು” ಎಂಬ ಸಂದೇಶವನ್ನು ನೀಡಿದೆ.