ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ ಇಂದು ಪ್ರಕಟಿಸಿರುವ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮುಖ್ಯ ಪರೀಕ್ಷೆಯ ಫಲಿತಾಂಶ ರಾಜ್ಯದಲ್ಲಿ ಈ ಬಾರಿ ಹೊಸ ದಾಖಲೆ ನಿರ್ಮಿಸಿದೆ. ಒಟ್ಟು ಉತ್ತೀರ್ಣ ಪ್ರಮಾಣ ಶೇ.94.10ಕ್ಕೆ ಏರಿಕೆಯಾಗಿದ್ದು, ಕಳೆದ ಕೆಲವು ವರ್ಷಗಳಿಗಿಂತ ಗಮನಾರ್ಹ ಸಾಧನೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಈ ಬಾರಿ ಫಲಿತಾಂಶದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಹಿಂದಿ (ತೃತೀಯ ಭಾಷೆ) ವಿಷಯದ ಸುತ್ತಲಿನ ಗೊಂದಲ. ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ತೃತೀಯ ವಿಷಯದಲ್ಲಿ ಅಂಕಗಳ ಬದಲು ಗ್ರೇಡ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಹೈ ಕೋರ್ಟ್ ಮಧ್ಯಪ್ರವೇಶ ಮಾಡಿ, “ಪರೀಕ್ಷೆಯ ಮಧ್ಯದಲ್ಲಿ ನಿಯಮ ಬದಲಾವಣೆ ಸರಿಯಲ್ಲ, ವಿದ್ಯಾರ್ಥಿಗಳಿಗೆ ಅಂಕ ನೀಡಲೇಬೇಕು” ಎಂದು ಸ್ಪಷ್ಟ ಆದೇಶ ನೀಡಿತ್ತು.
ಹಿಂದಿ ಫಲಿತಾಂಶ: ಗೊಂದಲದ ನಡುವೆ ಉತ್ತಮ ಸಾಧನೆ ಮಾಡಿದೆ. ಹೈಕೋರ್ಟ್ ಆದೇಶದಂತೆ ಇದೀಗ ಗ್ರೇಡ್ ಬದಲು ಅಂಕಗಳನ್ನು ನೀಡಲಾಗಿದೆ. ಈ ಹಿನ್ನೆಲೆ ಹಿಂದಿ ವಿಷಯದಲ್ಲಿ ಫೇಲಾದವರ ಸಂಖ್ಯೆ ಕಡಿಮೆಯಾಗಿದೆ.
ಒಟ್ಟು ಪರೀಕ್ಷೆ ಬರೆದವರು: 7,02,009
ಉತ್ತೀರ್ಣರಾದವರು: 6,92,528
ಅನುತ್ತೀರ್ಣರಾದವರು: ಸುಮಾರು 9,481
ಉತ್ತೀರ್ಣ ಪ್ರಮಾಣ: ಶೇ.98.7
ಈ ಅಂಕಿಅಂಶಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಉತ್ತಮವಾಗಿದ್ದು, ಗೊಂದಲದ ನಡುವೆಯೂ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಸೌಲಭ್ಯ : ಇನ್ನೊಂದೆಡೆ, ಹಿಂದಿ ವಿಷಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಲ್ಲಿ ಅಂಕ ಸುಧಾರಣೆ (improvement) ಪರೀಕ್ಷೆಗೆ ಶುಲ್ಕ ವಿನಾಯಿತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡುವ ಉದ್ದೇಶದಿಂದ ತೆಗೆದುಕೊಂಡ ಮಹತ್ವದ ಹೆಜ್ಜೆಯಾಗಿದೆ.
ಒಟ್ಟಾರೆಯಾಗಿ, ದಾಖಲೆ ಮಟ್ಟದ ಫಲಿತಾಂಶದ ನಡುವೆ ಉದ್ಭವಿಸಿದ ಗೊಂದಲಕ್ಕೆ ಹೈಕೋರ್ಟ್ ಮಧ್ಯಪ್ರವೇಶದಿಂದ ಪರಿಹಾರ ದೊರೆತಿದ್ದು, ವಿದ್ಯಾರ್ಥಿಗಳ ಹಿತ ರಕ್ಷಣೆ ಸಾಧ್ಯವಾಗಿದೆ.























