Home Advertisement
Home ಸುದ್ದಿ ರಾಜ್ಯ SSLC ಗ್ರೇಡ್ ವ್ಯವಸ್ಥೆಗೆ ಬ್ರೇಕ್: ಅಂಕ ನೀಡಲು ಕೋರ್ಟ್ ಸೂಚನೆ

SSLC ಗ್ರೇಡ್ ವ್ಯವಸ್ಥೆಗೆ ಬ್ರೇಕ್: ಅಂಕ ನೀಡಲು ಕೋರ್ಟ್ ಸೂಚನೆ

0
145
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ, ಹೈಕೋರ್ಟ್ ತೃತೀಯ ಭಾಷೆಗೆ (ಹಿಂದಿ ಸೇರಿದಂತೆ) ಈ ವರ್ಷ ಗ್ರೇಡ್ ವ್ಯವಸ್ಥೆ ಅನ್ವಯಿಸಬಾರದು ಎಂದು ಸ್ಪಷ್ಟಪಡಿಸಿ, ಅಂಕಗಳನ್ನೇ ನೀಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈಗಾಗಲೇ ಪರೀಕ್ಷೆಗಳು ಪೂರ್ಣಗೊಂಡಿರುವ ಹಿನ್ನೆಲೆ ಈ ವರ್ಷ ಹಳೆಯ ಪದ್ಧತಿಯನ್ನು ಮುಂದುವರಿಸಬೇಕು ಎಂದು ಸೂಚಿಸಿದೆ. ಈ ಮೂಲಕ ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಗಿದೆ.

ವಿಚಾರಣೆ ವೇಳೆ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ತೃತೀಯ ಭಾಷೆ, ವಿಶೇಷವಾಗಿ ಹಿಂದಿ ವಿಷಯದಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಫೇಲ್ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರೇಡಿಂಗ್ ವ್ಯವಸ್ಥೆ ಪರಿಚಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಈ ಕ್ರಮದ ಉದ್ದೇಶ ಎಲ್ಲರನ್ನು ಪಾಸ್ ಮಾಡಿಸುವುದೇನಾ?” ಎಂದು ಪ್ರಶ್ನಿಸಿ, ಪರೀಕ್ಷೆ ಮುಗಿದ ನಂತರ ನಿಯಮ ಬದಲಾವಣೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಈ ವರ್ಷ ಅಂಕಗಳನ್ನು ನೀಡುವ ಪದ್ಧತಿಯನ್ನು ಮುಂದುವರಿಸಲು ಸೂಚಿಸಿದ ನ್ಯಾಯಾಲಯ, ಮುಂದಿನ ವರ್ಷದಿಂದ ಅಗತ್ಯ ಬದಲಾವಣೆಗಳನ್ನು ಸರ್ಕಾರ ಕೈಗೊಳ್ಳಬಹುದು ಎಂದು ಹೇಳಿದೆ.

ಇದಲ್ಲದೆ, ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ತನ್ನ ಆದೇಶವನ್ನು ಬದಲಿಸಲು ನಿರಾಕರಿಸಿದೆ. ಈ ತೀರ್ಪಿನ ಮೂಲಕ ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳಲ್ಲಿ ಗ್ರೇಡ್ ಬದಲಾಗಿ ಅಂಕಗಳನ್ನು ನೀಡಲಾಗುವುದು ಎಂದು ಸ್ಪಷ್ಟವಾಗಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಈ ಬಗ್ಗೆ ಇದ್ದ ಗೊಂದಲಕ್ಕೆ ಅಂತ್ಯ ಕಂಡಿದೆ.