ಕಿಡ್ನಿ ಮಾರಾಟಕ್ಕೆ ಮುಂದಾದ ತಂದೆ – ಸರ್ಕಾರ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್ ನೆರವು.
ಕೋಲಾರ/ಬೆಂಗಳೂರು: ಕೆಜಿಎಫ್ ತಾಲೂಕಿನ ವಿದ್ಯಾರ್ಥಿನಿ ಕುಸುಮಾ SSLC ಪರೀಕ್ಷೆ ವೇಳೆ ತೋರಿಸಿದ ಮನೋಬಲ ದೇಶದ ಗಮನ ಸೆಳೆದಿದ್ದರೆ, ಇದೀಗ ಆಕೆಯ ಚಿಕಿತ್ಸೆಗೆ ಎದುರಾದ ಸಂಕಷ್ಟದ ವೇಳೆ ಮಾನವೀಯತೆಗೂ ಹೊಸ ಉದಾಹರಣೆ ಮೂಡಿದೆ. ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಟ್ರೆಚರ್ ಮೇಲೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಕುಸುಮಾ ಈಗ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ, ಮಾಜಿ ಸಚಿವ ಸುರೇಶ್ ಕುಮಾರ್ ನೆರವಿಗೆ ಧಾವಿಸಿದ್ದಾರೆ.
ಅಪಘಾತ – ಆದರೆ ಕುಗ್ಗದ ಆತ್ಮವಿಶ್ವಾಸ : ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿ ನಿವಾಸಿ, ಸೆಂಟ್ ಮೇರಿಸ್ ಹೈಸ್ಕೂಲ್‌ನ 16 ವರ್ಷದ ಕುಸುಮಾ, ಇತ್ತೀಚಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದಳು. ಶಸ್ತ್ರಚಿಕಿತ್ಸೆ ಬಳಿಕವೂ ಆಕೆ ವಿದ್ಯಾಭ್ಯಾಸದ ಮೇಲೆ ಆಸಕ್ತಿ ಕಳೆದುಕೊಳ್ಳದೆ, ತಾಯಿಯೊಂದಿಗೆ ಆಂಬ್ಯುಲೆನ್ಸ್ ಮೂಲಕ ಕೆಜಿಎಫ್‌ನ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಟ್ರೆಚರ್ ಮೇಲೆಯೇ ಪರೀಕ್ಷೆ ಬರೆದು ಎಲ್ಲರ ಮನಗೆದ್ದಳು.
ಮಗಳ ಚಿಕಿತ್ಸೆಗಾಗಿ ಕಿಡ್ನಿ ಮಾರಾಟಕ್ಕೂ ಮುಂದಾದ ತಂದೆ: ಚಿಕಿತ್ಸೆಗೆ ಹಣದ ಕೊರತೆಯಿಂದಾಗಿ ತಂದೆಯು ಸಂಕಷ್ಟಕ್ಕೆ ಸಿಲುಕಿದ್ದರು, ಚಿಕಿತ್ಸೆ ವೆಚ್ಚ ದಿನೇದಿನೇ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಸುಮಾ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ನಾಲ್ಕು ದಿನಗಳಲ್ಲೇ ₹5.5 ಲಕ್ಷ ವೆಚ್ಚವಾಗಿದ್ದರಿಂದ, ಆಕೆಯ ತಂದೆ ಶಂಕರಪ್ಪ ಮಗಳ ಚಿಕಿತ್ಸೆಗಾಗಿ ಕಿಡ್ನಿ ಮಾರಾಟಕ್ಕೂ ಮುಂದಾಗಿದ್ದರು ಎಂಬುದು ಮನಕಲುಕುವ ಸಂಗತಿ.
ಮಿಡಿದ ಜನಪ್ರತಿನಿಧಿಗಳ ಹೃದಯ – ಮಾನವೀಯತೆ ಮೆರೆದ ನೆರವು : ಈ ವಿಷಯ ತಿಳಿದ ತಕ್ಷಣ ಮಾಜಿ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದ ಜೊತೆ ಮಾತನಾಡಿದರು. ನಂತರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಗಮನಕ್ಕೆ ವಿಷಯವನ್ನು ತಂದರು.
ಸರ್ಕಾರದ ಮಧ್ಯಸ್ಥಿಕೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಚಿಕಿತ್ಸೆ ವೆಚ್ಚ ಭರಿಸುವ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ, ಆಸ್ಪತ್ರೆ ಆಡಳಿತ ಮಂಡಳಿಯು ಸಹ ಮಾನವೀಯತೆ ತೋರಿಸಿ ಕುಸುಮಾಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆ. ಮುಂದಿನ ಕೆಲ ದಿನಗಳಲ್ಲಿ ಆರೋಗ್ಯದಲ್ಲಿ ಸುಧಾರಣೆ ತರಲು ವೈದ್ಯರು ಭರವಸೆ ನೀಡಿದ್ದಾರೆ.
ಸಾರ್ವಜನಿಕರಿಂದ ಮೆಚ್ಚುಗೆ : ಕುಸುಮಾ ಧೈರ್ಯಕ್ಕೂ, ಹಾಗೂ ಸಂಕಷ್ಟದ ಸಮಯದಲ್ಲಿ ನೆರವಾದ ನಾಯಕರ ಮಾನವೀಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಘಟನೆ, ಮನೋಬಲ ಮತ್ತು ಮಾನವೀಯತೆ ಎರಡೂ ಒಟ್ಟಿಗೆ ಸಮಾಜವನ್ನು ಬಲಪಡಿಸುತ್ತವೆ ಎಂಬ ಸಂದೇಶ ನೀಡಿದೆ.






















