Home Advertisement
Home ನಮ್ಮ ಜಿಲ್ಲೆ ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಐಷಾರಾಮಿ ಕಾರು ಬಳಕೆ; ನೆಟ್ಟಿಗರು ಶಾಕ್.. ಕೊನೆಯಲ್ಲಿದೆ ಅಸಲಿ ಟ್ವಿಸ್ಟ್!

ರಸ್ತೆ ಗುಂಡಿ ಮುಚ್ಚಲು ಐಷಾರಾಮಿ ಕಾರು ಬಳಕೆ; ನೆಟ್ಟಿಗರು ಶಾಕ್.. ಕೊನೆಯಲ್ಲಿದೆ ಅಸಲಿ ಟ್ವಿಸ್ಟ್!

0
14

ಬೆಂಗಳೂರಿನ ರಸ್ತೆ ಹೊಂಡಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ. ಆದರೆ ಅಖಿಲ್ ಯಾದವ್ ಎಂಬುವವರು ಮಾಡಿರುವ ಈ ಸಾಹಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತನ್ನ ಕೆಂಪು ಬಣ್ಣದ ಐಷಾರಾಮಿ ಪೋರ್ಷೆ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಮತ್ತು ನೀರನ್ನು ಸುರಿದು, ಅದನ್ನು ಅಲ್ಲೇ ಮಿಕ್ಸ್ ಮಾಡಿ ರಸ್ತೆಯ ಗುಂಡಿಯನ್ನು ಮುಚ್ಚುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಕೋಟಿ ಬೆಲೆಯ ಕಾರಿನ ಮೇಲೆ ಹೀಗೆ ಸಿಮೆಂಟ್ ಕಲಸುತ್ತಿರುವುದನ್ನು ಕಂಡು ನೆಟ್ಟಿಗರು ಒಂದು ಕ್ಷಣ ಶಾಕ್ ಆಗಿದ್ದರು.

ಆದರೆ ಈ ವಿಡಿಯೋದಲ್ಲಿ ಒಂದು ಟ್ವಿಸ್ಟ್ ಇದೆ. ಗುಂಡಿ ಮುಚ್ಚಿದ ನಂತರ ಅಖಿಲ್ ತನ್ನ ಕಾರಿನ ಮೇಲಿದ್ದ ಪೇಂಟ್ ಪ್ರೊಟೆಕ್ಷನ್ ಫಿಲ್ಮ್ (PPF) ಅನ್ನು ಸುಲಿದು ಹಾಕುತ್ತಾರೆ. ಆಶ್ಚರ್ಯವೆಂದರೆ, ಅಷ್ಟು ಸಿಮೆಂಟ್ ಹಾಕಿದರೂ ಕಾರಿನ ಅಸಲಿ ಬಣ್ಣಕ್ಕೆ ಕಿಂಚಿತ್ತೂ ಹಾನಿಯಾಗಿರುವುದಿಲ್ಲ. ಈ ಮೂಲಕ ಅವರು ಪಿಪಿಎಫ್‌ನ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ, ಸಾರ್ವಜನಿಕ ಜವಾಬ್ದಾರಿಯ ಬಗ್ಗೆ ಒಂದು ಸಂದೇಶ ನೀಡಲು ಮುಂದಾಗಿದ್ದಾರೆ. “ನಮ್ಮದು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ, ಕೇವಲ ಸರ್ಕಾರವೇ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ, ಪ್ರತಿಯೊಬ್ಬ ನಾಗರಿಕನೂ ತನ್ನ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೊರಬೇಕು” ಎನ್ನುವುದು ಅಖಿಲ್ ಅವರ ಆಶಯವಾಗಿದೆ.

ಈ ವಿಡಿಯೋಗೆ ಇಂಟರ್ನೆಟ್ ಲೋಕದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದೊಂದು ಸೃಜನಾತ್ಮಕ ಪ್ರಯತ್ನ ಎಂದು ಹೊಗಳಿದರೆ, ಇನ್ನು ಕೆಲವರು ಇದೊಂದು ಕೇವಲ ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಮತ್ತು ಜಾಹೀರಾತು ಎಂದು ಟೀಕಿಸಿದ್ದಾರೆ. “ರಸ್ತೆ ಗುಂಡಿ ಮುಚ್ಚಲು ಐಷಾರಾಮಿ ಕಾರನ್ನೇ ಬಳಸಬೇಕಿತ್ತೇ?” ಎಂದು ಕೆಲವರು ಪ್ರಶ್ನಿಸಿದರೆ, “ಪಿಪಿಎಫ್ ಗುಣಮಟ್ಟವನ್ನು ತೋರಿಸಲು ಇದಕ್ಕಿಂತ ಉತ್ತಮ ಹಾದಿ ಇರಲಿಲ್ಲ” ಎಂದು ಕಾರು ಪ್ರಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಏನೇ ಆಗಲಿ, ಈ ವಿಭಿನ್ನ ಪ್ರಯತ್ನ ಮಾತ್ರ ಈಗ ಸಿಲಿಕಾನ್ ಸಿಟಿಯಲ್ಲಿ ಸಂಚಲನ ಮೂಡಿಸಿದೆ.