ಹುಬ್ಬಳ್ಳಿ: ನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ‘ವಸಂತ ಋತುಗಾನ–ಕಲಾಯಾನ’ ಮಹೋತ್ಸವಕ್ಕೆ ಹುಬ್ಬಳ್ಳಿಯಲ್ಲಿ ಭವ್ಯ ಚಾಲನೆ ದೊರೆತಿದೆ. ಸಂಯುಕ್ತ ಕರ್ನಾಟಕ, ಶ್ರೀ ಸಿದ್ಧಾರೂಢಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಕಲೋತ್ಸವವು ಕಲೆ, ಸಂಸ್ಕೃತಿ ಮತ್ತು ಜ್ಞಾನವನ್ನು ಒಟ್ಟುಗೂಡಿಸುವ ವೇದಿಕೆಯಾಗಿದ್ದು, ಜನಮನ ಸೆಳೆಯುತ್ತಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, “ಪತ್ರಿಕೆಯಾಗಿ ಕೇವಲ ಸುದ್ದಿ ನೀಡುವುದಲ್ಲದೆ, ಸಮಾಜದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಸಂಯುಕ್ತ ಕರ್ನಾಟಕದ ಪ್ರಯತ್ನ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು. ಪವಿತ್ರ ಕ್ಷೇತ್ರವಾದ ಸಿದ್ಧಾರೂಢ ಮಠದಲ್ಲಿ ಈ ಉತ್ಸವ ನಡೆಯುತ್ತಿರುವುದು ಕಾರ್ಯಕ್ರಮಕ್ಕೆ ವಿಶೇಷ ಅರ್ಥ ನೀಡುತ್ತದೆ ಎಂದು ಹೇಳಿದರು.
ಲೋಕ ಶಿಕ್ಷಣ ಟ್ರಸ್ಟ್ ವತಿಯಿಂದ ನೀಡಲಾಗುವ ‘ಲೋಕ ಶಿಕ್ಷಣ ಆರೂಢ ಪ್ರಶಸ್ತಿ’ ಸ್ವೀಕರಿಸಿದ ಡಾ. ವೀಣಾ ಶಾಂತೇಶ್ವರ ಮಾತನಾಡಿ, “ಸಂಯುಕ್ತ ಕರ್ನಾಟಕ ನನ್ನ ಬರವಣಿಗೆಯ ಬೆಳವಣಿಗೆಗೆ ಕಾರಣವಾದ ಪತ್ರಿಕೆ. ಈ ಪ್ರಶಸ್ತಿ ತವರು ಮನೆಯ ಗೌರವದಂತೆ ಭಾಸವಾಗುತ್ತಿದೆ” ಎಂದರು. ಇದೇ ವೇಳೆ ಪ್ರಶಸ್ತಿ ಪುರಸ್ಕೃತರಾದ ಡಾ. ವಿ.ಎಸ್.ವಿ. ಪ್ರಸಾದ್ ಅವರು ಸಂಯುಕ್ತ ಕರ್ನಾಟಕದ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸಿ, ಸಿದ್ಧಾರೂಢರ ಮಹಾತ್ಮೆಯ ಕುರಿತ ಚಲನಚಿತ್ರ ನಿರ್ಮಾಣದ ಯೋಜನೆಯನ್ನು ಹಂಚಿಕೊಂಡರು.
ಹಿರಿಯರಾದ ಕೃಷ್ಣ ಕೋಲ್ಹಾರ ಕುಲಕರ್ಣಿ ಮತ್ತು ಹೃದಯ ತಜ್ಞ ಡಾ. ಗೀರೀಶ ನವಸುಂದಿ ಅವರು ಸಂಯುಕ್ತ ಕರ್ನಾಟಕ ಹಾಗೂ ಸಿದ್ಧಾರೂಢಮಠದ ಸಾಂಸ್ಕೃತಿಕ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಬಿಸರಳ್ಳಿಯ ಶ್ರೀ ಶಿವ ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿ, “ಮಾನವ ಯಂತ್ರಗಳನ್ನು ನಿಯಂತ್ರಿಸಲು ಕಲಿತಿದ್ದಾನೆ, ಆದರೆ ಮನಸ್ಸನ್ನು ನಿಯಂತ್ರಿಸಲು ಇನ್ನೂ ಕಲಿಯಬೇಕಿದೆ. ಇಂತಹ ಮಠಗಳ ಸಂಪರ್ಕ ಮಾನಸಿಕ ಶಾಂತಿಗೆ ಸಹಕಾರಿ” ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು, ಟ್ರಸ್ಟ್‌ಗಳ ಉದ್ದೇಶ ಸಮಾಜಮುಖಿ ಕಾರ್ಯಗಳೇ ಆಗಿದ್ದು, ಈ ಸಂಯುಕ್ತ ಕಾರ್ಯಕ್ರಮ ಅದಕ್ಕೆ ಉದಾಹರಣೆ ಎಂದು ತಿಳಿಸಿದರು.
ಶ್ರಿ ಸಿದ್ಧಾರೂಢಮಠ ಆಡಳಿತಾಧಿಕಾರಿ, ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ , ಸಿದ್ಧಾರೂಢಮಠ ಟ್ರಸ್ಟ್ ಕಮೀಟಿ ಅಧ್ಯಕ್ಷ ಬಾಳು ಮಗಜಿಕೊಂಡಿ, ವೈಸ್ ಚೇರಮನ್ ಗೀತಾ ಕಲಬುರ್ಗಿ, ಕಾರ್ಯದರ್ಶಿ ವಿನಾಯಕ ಘೋಡ್ಕೆ, ಧರ್ಮದರ್ಶಿ ಚನ್ನವೀರ ಮುಂಗರವಾಡಿ, ಡಾ. ಗೋವಿಂದ ಮಣ್ಣೂರು, ಉದಯಕುಮಾರ ನಾಯಕ , ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿಗಳಾದ ಕೇಶವ ದೇಸಾಯಿ, ಡಿ.ಆರ್ ಪಾಟೀಲ, ಲೋಕ ಶಿಕ್ಷಣ ಅರೂಢ ಪ್ರಶಸ್ತಿ ಪುರಸ್ಕತರಾದ ಉದ್ಯಮಿ ಶಂಕರಣ್ಣ ಮುನವಳ್ಳಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ , ಲೋಕ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಹರಿ ಚನ್ನಕೇಶವ, ಸಂಯುಕ್ತ ಕರ್ನಾಟಕ ಸಂಪಾದಕ ಮಹಾಬಲೇಶ್ವರ ಸೀತಾಳಬಾವಿ ಹಾಗೂ ಗಣ್ಯರು ವೇದಿಕೆಯಲ್ಲಿದ್ದರು. ಸಂಯುಕ್ತ ಕರ್ನಾಟಕ ಸಿಇಓ ಹಾಗೂ ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ಸ್ವಾಗತಿಸಿದರು. ಸಿದ್ಧಾರೂಢಮಠ ಟ್ರಸ್ಟ್ ಕಮೀಟಿ ಧರ್ಮದರ್ಶಿ ಡಾ.ಗೋವಿಂದ ಮಣ್ಣೂರು ವಂದಿಸಿದರು.
ಕಾರ್ಯಕ್ರಮದಲ್ಲಿ ಸಿದ್ಧಾರೂಢಮಠ ಟ್ರಸ್ಟ್ ಹಾಗೂ ಲೋಕ ಶಿಕ್ಷಣ ಟ್ರಸ್ಟ್‌ನ ವಿವಿಧ ಪದಾಧಿಕಾರಿಗಳು, ಗಣ್ಯರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೂಲಕ ಉತ್ತರ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತೊಮ್ಮೆ ಪ್ರತ್ಯಕ್ಷವಾಗಿ ಕಾಣಿಸಿಕೊಂಡಿತು.






















