Home Advertisement
Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕದ ಭವ್ಯ ಸಾಂಸ್ಕೃತಿಕ ಹಬ್ಬ: ಏಪ್ರಿಲ್ 17ರಿಂದ `ವಸಂತ ಋತುಗಾನ- ಕಲಾಯಾನ’

ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕದ ಭವ್ಯ ಸಾಂಸ್ಕೃತಿಕ ಹಬ್ಬ: ಏಪ್ರಿಲ್ 17ರಿಂದ `ವಸಂತ ಋತುಗಾನ- ಕಲಾಯಾನ’

0
296

ಹುಬ್ಬಳ್ಳಿ: ವಸಂತನ ಜಾಡಿನಲ್ಲಿ ಸಾಂಸ್ಕೃತಿಕ ಹೆಜ್ಜೆಗಳನ್ನು ಹಾಕುತ್ತ ಭಾವಲೋಕಕ್ಕೆ ಕರೆದೊಯ್ಯಲಿರುವ `ವಸಂತ ಋತುಗಾನ- ಕಲಾಯಾನ’ಕ್ಕೆ ಹುಬ್ಬಳ್ಳಿಯಲ್ಲಿ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 17ರಿಂದ ಈ ಸಾಂಸ್ಕೃತಿಕ ಕಲೋತ್ಸವಕ್ಕಾಗಿ ಅವಳಿನಗರ ಸಜ್ಜಾಗುತ್ತಿದೆ. ಈ ಭವ್ಯ ಕಲಾಯಾನ ಹುಬ್ಬಳ್ಳಿ-ಧಾರವಾಡದ ಸೃಜನಾತ್ಮಕ ತಂತುಗಳಿಗೆ ವಿಶಿಷ್ಟ ಸ್ಪಂದನೆ ನೀಡಲಿದೆ.

ಸಂಯುಕ್ತ ಕರ್ನಾಟಕ ಏರ್ಪಡಿಸಿರುವ ವಸಂತ ಋತುಗಾನ- ಕಲಾಯಾನ ಕಲೋತ್ಸವ ಏಪ್ರಿಲ್ 17ರಿಂದ ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ ಆರಂಭವಾಗಲಿದೆ. ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳು ಈ ಮಹತ್ವಪೂರ್ಣ ಉತ್ಸವಕ್ಕೆ ಸಹಯೋಗ ನೀಡುತ್ತಿವೆ.

ಪತ್ರಿಕೆಯ ಈ ಮಹತ್ವಾಕಾಂಕ್ಷಿ ಸಾಂಸ್ಕೃತಿಕ ಉತ್ಸವದಲ್ಲಿ ಜಾನಪದ, ಶಾಸ್ತ್ರೀಯ ಗಾಯನ; ಜಾನಪದ ಕಲೆಗಳ ಪ್ರದರ್ಶನ, ಮಲ್ಲಕಂಬ- ಸಾಂಬ್ರಾಣಿ ಕಲ್ಲುಗಳ ಸಾಹಸ ಪ್ರದರ್ಶನ; ಯಕ್ಷಗಾನ ಪ್ರದರ್ಶನ, ನೃತ್ಯ ರೂಪಕ; ಸಿದ್ಧಾರೂಢರ ಮಹಾತ್ಮೆ ಸೇರಿದಂತೆ ಎರಡು ನಾಟಕಗಳ ಪ್ರದರ್ಶನ ನಡೆಯಲಿವೆ.

ಇವಷ್ಟೇ ಅಲ್ಲದೇ, ಜಾನಪದ ಕಲಾ ತಂಡಗಳಿಂದ ಆಕರ್ಷಕ ಮೆರವಣಿಗೆ, ಮುಖ್ಯ ವೇದಿಕೆಯ ಮೇಲೆ ಚೌಡಕಿ, ಗೀಗೀ ಪದದಂತಹ ನಗರವಾಸಿಗಳಿಗೆ ಅಪರೂಪದ ಜಾನಪದ ಶ್ರೀಮಂತಿಕೆ ಅನಾವರಣಗೊಳ್ಳಲಿದೆ. ಜೊತೆಗೆ, ಹೆಚ್ಚೂ ಕಡಿಮೆ ಅಳಿವಿನ ಅಂಚಿನಲ್ಲಿರುವ ಗೋಂಧಳಿ ಮತ್ತು ಸುಡುಗಾಡ ಸಿದ್ಧರ ವಾಣಿಯಂತಹ ಕಲೆಗಳು ಮತ್ತೆ ಮೈದಾಳಿ ಹೊಸ ಅನುಭವ ನೀಡಲಿವೆ.

ಯಾವುದೇ ಸಾಂಸ್ಕೃತಿಕ ಉತ್ಸವಕ್ಕೆ ವ್ಯಕ್ತಿತ್ವ ವಿಕಸನದ ಮಾತು ಮತ್ತು ಆರೋಗ್ಯದ ಸಂವಾದಗಳು ಕಾರ್ಯಕ್ರಮದ ಸವಿಯನ್ನು ಹೆಚ್ಚಿಸುವಂಥವಾಗಿರುತ್ತವೆ. ಪತ್ರಿಕೆಯ ಈ ಉತ್ಸವದಲ್ಲೂ ವ್ಯಕ್ತಿತ್ವ ವಿಕಸನ ಹಾಗೂ ಆರೋಗ್ಯ ಚಿಂತನೆಯನ್ನು ಈ ಕಾರಣಕ್ಕೇ ಅಳವಡಿಸಲಾಗಿದೆ.

ಖ್ಯಾತ ಹೃದ್ರೋಗ ತಜ್ಞ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ, ಪ್ರಸಿದ್ಧ ಮಧುಮೇಹ ವೈದ್ಯ ಡಾ.ಸುನಿಲ್ ಕರಿ, ಪದ್ಮಶ್ರೀಗೆ ಭಾಜನರಾಗಿರುವ ಹಿಮೋಫಿಲಿಯಾ ತಜ್ಞ ಡಾ.ಸುರೇಶ ಹನಗವಾಡಿ ಆರೋಗ್ಯ ಮಾತುಗಳನ್ನಾಡಲಿದ್ದಾರೆ.

ಅಡುಗೆ ಮನೆಯೇ ಹೇಗೆ ಎಲ್ಲರಿಗೂ ಆರೋಗ್ಯ ನೀಡಬಲ್ಲದು ಎಂಬ ವಿಷಯದ ಕುರಿತು ಹೆಸರಾಂತ ಪಾರಂಪರಿಕ ವೈದ್ಯ ಹನುಮಂತ ಮಳಲಿ ಭಾಷಣ ಮಾಡಲಿದ್ದಾರೆ. ಪ್ರಸಿದ್ಧ ವ್ಯಕ್ತಿತ್ವ ವಿಕಸನಕಾರ ಚೇತನ ರಾಮ್ `ಚೆನ್ನಾಗಿ ಬಾಳುವುದು ಎಂದರೇನು’ ಎಂಬುದರ ಬಗ್ಗೆ ವಿಸ್ತಾರವಾಗಿ ಭಾಷಣ ಮಾಡಲಿದ್ದು, ಇದಕ್ಕೆ ಪೂರಕವಾದ ಧ್ಯಾನದಿಂದ ಹೇಗೆ ಬದುಕು ಹಸನಾಗುತ್ತದೆ ಎಂಬುದನ್ನು ವಿಶಾಲಾಕ್ಷಿ ಆಕಳವಾಡಿ ತಿಳಿಸಿಕೊಡಲಿದ್ದಾರೆ.

ಹಲಸು-ಮಾವು ಗೆಡ್ಡೆ ಗೆಣಸಿನ ಸಿರಿ ವೈಭವ : ಹಾಡು-ಹಸೆ-ಜಾನಪದ-ದೇಸಿ-ಶಾಸ್ತ್ರೀಯ ಸಂಗೀತ ನೃತ್ಯ ವೈಭವಗಳ ಜೊತೆಗೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಮೇಳ; ಜೀವವೈವಿಧ್ಯ ಮೇಳ ಮತ್ತು ಹಲಸು- ಮಾವು, ಗೆಡ್ಡೆ ಗೆಣಸು, ಸಿರಿಧಾನ್ಯ ಮೇಳಗಳು; ಹತ್ತು ಹಲವು ಬಗೆಯ ಜೀವನಾವಶ್ಯಕ- ಜೀವನಕ್ಕೆ ಉಪಯೋಗ ಆಗುವ ಮಳಿಗೆಗಳು ಈ ಮೂರೂ ದಿನ ಕಲಾಯಾನದ ಇನ್ನಿತರ ಆಕರ್ಷಣೆಗಳಾಗಿವೆ.

ಶಾಸ್ತ್ರೀಯ ಸಂಗೀತ- ಜಾನಪದ ಸೊಗಡಿನ ಹೂರಣ : ಖ್ಯಾತ ಗಾಯಕ ಪಂಡಿತ್ ಎಂ.ವೆಂಕಟೇಶ ಕುಮಾರ್, ಉಸ್ತಾದ್ ಶಫಿಕ್ ಖಾನ್, ವಿದುಷಿ ರೇಖಾ ಹೆಗಡೆ, ಕುಮಾರಿ ಭಾಗ್ಯಶ್ರೀ ಹೂಗಾರ್, ಕುಮಾರಿ ಐಶ್ವರ್ಯ ದೇಸಾಯಿ, ಚಿತ್ರಲೇಖಾ ನಾಯಕ್, ಶ್ರೀ ಲಕ್ಷ್ಮೀ ಹೆಗಡೆ, ಸುಜಯ್ ಶಾನಭಾಗ್, ತುಳಸಿ ಹೆಗಡೆ ಸೇರಿದಂತೆ ಪ್ರಸಿದ್ಧರು ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾ ಪ್ರಸ್ತುತ ಪಡಿಸಲಿದ್ದಾರೆ. ಸಾಂಬಯ್ಯ ಹಿರೇಮಠ, ಡಾ. ರಾಮು ಮೂಲಗಿ ಸೇರಿದಂತೆ ಖ್ಯಾತನಾಮರು ಜಾನಪದ ಮತ್ತು ದೇಸಿ ಸೊಗಡನ್ನು ಹೆಚ್ಚಿಸಲಿದ್ದಾರೆ.

ಏಪ್ರಿಲ್ 17, 18 ಮತ್ತು 19ರಂದು ಮೂರು ದಿನಗಳ ಕಾಲ ಬೆಳಿಗ್ಗೆ 9ರಿಂದ ಆರಂಭವಾಗಲಿರುವ `ಕಲಾಯಾನ’ ರಾತ್ರಿಯವರೆಗೆ ಸಾಗಲಿದೆ. ವೇದಿಕೆಯಲ್ಲಿನ ಸಭಾ ಕಾರ್ಯಕ್ರಮಗಳ ಜೊತೆ ಜೊತೆಗೇ ಜಾನಪದ ಹಾಡು- ಹಸೆಗಳು ನಿರಂತರವಾಗಿ ಕೇಳಿ ಬರಲಿರುವುದು ಉತ್ಸವದ ಇನ್ನೊಂದು ವೈಶಿಷ್ಟ್ಯ.

ಮಳಿಗೆಗಳು ಲಭ್ಯ: ಈ ಕಲೋತ್ಸವದ ಅಂಗವಾಗಿ ಸಿದ್ಧಾರೂಢ ಸ್ವಾಮೀಜಿ ಮಠದ ಆವರಣದಲ್ಲಿ ಹತ್ತು ಹಲವು ವಿಶಿಷ್ಟ ಮಳಿಗೆಗಳು ಮೈದಾಳಲಿವೆ. ಸಿರಿಧಾನ್ಯ, ಸ್ಥಳೀಯ ತಿಂಡಿ ತಿನಿಸು, ಹಲಸು- ಮಾವು, ಜೀವವೈವಿಧ್ಯ ಸೇರಿದಂತೆ ಅನೇಕ ಮಳಿಗೆಗಳು ತಲೆ ಎತ್ತಲಿವೆ. ಕೆಲವೇ ಕೆಲವು ಮಳಿಗೆಗಳು ಉಳಿದಿದ್ದು, ಸಾವಯವ ಪದಾರ್ಥಗಳ ಮಾರಾಟಗಾರರು, ಸಿರಿಧಾನ್ಯಗಳ ವರ್ತಕರು, ಸ್ಥಳೀಯ ವಿಶೇಷತೆಗಳ ಮಾರಾಟಗಾರರು ಹಾಗೂ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಇಚ್ಛಿಸುವವರು ಸಂಪರ್ಕಿಸಬಹುದಾಗಿದೆ.

ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 9900049656 ಮತ್ತು 7411011002. ತ್ವರೆ ಮಾಡಿ. ನಿಮ್ಮ ಮಳಿಗೆಗಳನ್ನು ಕಾದಿರಿಸಿ.