ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇಂದು ನೂತನವಾಗಿ ನಿರ್ಮಿಸಲಾದ “ಶ್ರೀಗುರು ಭೈರವೈಕ್ಯ ಮಂದಿರ”ವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು. ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಬುಧವಾರ ಬೆಳಿಗ್ಗೆ ಪ್ರಧಾನಿಯವರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದರು.
ನಂತರ ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿಕೊಂಡರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಎಲ್ಲರು ಹಾಜರಿದ್ದರು. ಇದೇ ವೇಳೆ ಸಿದ್ದರಾಮಯ್ಯ ರಾಜ್ಯದ ವಿವಿಧ ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಪ್ರಧಾನಿಯವರಿಗೆ ಸಲ್ಲಿಸಿ ಚರ್ಚಿಸಿದರು.
ಇದಾದ ನಂತರ ಎಲ್ಲ ಗಣ್ಯರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿದರು. ಪ್ರಧಾನಿ ಮೋದಿ ಮೊದಲು ಜ್ವಾಲಾಪೀಠಕ್ಕೆ (ಉರಿಗದ್ದುಗೆ) ಭೇಟಿ ನೀಡಿದರು. ಇದು ಗುರು ಗೋರಖನಾಥರು ತಪಸ್ಸು ಮಾಡಿದ್ದ ಪವಿತ್ರ ಸ್ಥಳವೆಂದು ನಂಬಲಾಗಿದೆ. ಅಲ್ಲಿ ದರ್ಶನ ಪಡೆದ ನಂತರ, ಕ್ಷೇತ್ರದ ಅಧಿದೇವತೆ ಕಾಲಭೈರವನಿಗೆ ವಿಶೇಷ ಮಂಗಳಾರತಿ ಮತ್ತು ಪೂಜೆ ಸಲ್ಲಿಸಿದರು. ಬಳಿಕ ಭೈರವೈಕ್ಯ ಮೂಲಮಂದಿರದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ, ದೇವಾಲಯವನ್ನು ಸಾರ್ವಜನಿಕ ಲೋಕಾರ್ಪಣೆಗೊಳಿಸಿದರು.
ಈ ಭೈರವೈಕ್ಯ ಮಂದಿರವು ಆದಿಚುಂಚನಗಿರಿ ಮಠದ ಹಿಂದಿನ ಗುರುಗಳ ಸ್ಮರಣಾರ್ಥವಾಗಿ ನಿರ್ಮಿಸಲಾದ ಭವ್ಯ ಸ್ಮಾರಕವಾಗಿದೆ. ಉದ್ಘಾಟನಾ ಸಮಾರಂಭದ ನಂತರ ಆಯೋಜಿಸಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಪ್ರಧಾನಿಯವರ ಈ ಭೇಟಿಯು ಶ್ರೀ ಕ್ಷೇತ್ರದ ಭಕ್ತರಲ್ಲಿ ಹೊಸ ಸಂಚಲನ ಮೂಡಿಸಿದ್ದು, ಪ್ರಸ್ತುತ ಸ್ಥಳದಿಂದ ಸುತ್ತೂಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.























