ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಾಳೆಹಣ್ಣಿನ ಬೆಲೆ ದಿಢೀರ್ ಕುಸಿತ ಕಂಡಿರುವುದು ಗ್ರಾಹಕರಿಗೆ ಖುಷಿಯಾಗಿದ್ದರೆ ಇತ್ತ ಬಾಳೆ ಬೆಳೆಗಾರರು ಬೇಸರಗೊಂಡಿದ್ದಾರೆ. ತಮಿಳುನಾಡಿನ ಮೆಟ್ಟೂರು ಭಾಗದಲ್ಲಿ ಬೀಸಿದ ಭಾರಿ ಗಾಳಿ ಮತ್ತು ವಿಪರೀತ ಶಾಖದಿಂದಾಗಿ ಹಣ್ಣುಗಳು ಕೊಯ್ಲಿಗೆ ಬರುವ ಮುನ್ನವೇ ಗಿಡದಿಂದ ಉದುರಿವೆ.
ಇದರಿಂದಾಗಿ ಮಾರುಕಟ್ಟೆಗೆ ಆಕಾಲಿಕವಾಗಿ ಕಟಾವು ಮಾಡಿದ. ಕಡಿಮೆ ಗುಣಮಟ್ಟದ ಬಾಳೆಹಣ್ಣುಗಳು ಭಾರೀ ಪ್ರಮಾಣದಲ್ಲಿ ಆವಕವಾಗಿದೆ. ಇದರ ಪ್ರಮುಖ ತಳಿಗಳ ಬೆಲೆಯಲ್ಲಿ ಪ್ರತಿ ಕೆ.ಜಿಗೆ ಕನಿಷ್ಠ 15 ರೂ.ಗಳಷ್ಟು ಇಳಿಕೆಯಾಗಿದೆ. ಕೆಲವು ದಿನಗಳ ಹಿಂದೆ ಪ್ರತಿ ಕೆಜಿಗೆ 60-65 ರೂ.ಗೆ ಮಾರಾಟವಾಗುತ್ತಿದ್ದ ಏಲಕ್ಕಿ ಬಾಳೆಹಣ್ಣು ಈಗ ಕೇವಲ 15ರಿಂದ 40 ರೂ.ಗೆ ಲಭ್ಯವಿದೆ.
ಅದೇ ರೀತಿ ಒಂದು ತಿಂಗಳ ಹಿಂದೆ ಕೆ.ಜಿಗೆ 25-35 ರೂ. ಇದ್ದ ಪಚ್ಚ ಬಾಳೆ ತಳಿಯ ಬೆಲೆ ಈಗ ಬಿನ್ನಿಮಿಲ್ ಮಂಡಿ ಮತ್ತು ಕೆ.ಆರ್.ಮಾರುಕಟ್ಟೆಯಲ್ಲಿ ಕೇವಲ 15ರಿಂದ 20 ರೂ.ಗೆ ಇಳಿದಿದೆ. ಪ್ರಸ್ತುತ ಮಾರುಕಟ್ಟೆಗೆ ಬರುತ್ತಿರುವ ಬಹುಪಾಲು ಹಣ್ಣುಗಳು ತಮಿಳುನಾಡಿನ ಮೆಟ್ಟೂರಿನಿಂದ ಬರುತ್ತಿವೆ. ಅಲ್ಲಿನ ಭಾರಿ ಗಾಳಿಗೆ ಸಿಲುಕಿ ಹಣ್ಣುಗಳು ನೆಲಕ್ಕುರುಳುತ್ತಿರುವುದರಿಂದ ರೈತರು ಮತ್ತಷ್ಟು ನಷ್ಟ ತಪ್ಪಿಸಲು ಕೇವಲ ಶೇ.40ರಿಂದ 60ರಷ್ಟು ಮಾತ್ರ ಹಣ್ಣಾದ ಬಾಳೆಹಣ್ಣುಗಳನ್ನು ಅವಧಿಗೂ ಮುನ್ನವೇ ಕಟಾವು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ.
ಹೀಗೆ ಮಾರುಕಟ್ಟೆಗೆ ತಂದ ಹಣ್ಣನ್ನು ಹೇಗಾದರೂ ಮಾಡಿ ಖಾಲಿ ಮಾಡಲು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಬಾಳೆಹಣ್ಣುವರ್ತಕರು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಕಾರಣದಿಂದಾಗಿ ಬಾಳೆಹಣ್ಣಿನ ರಫ್ತು ಪ್ರಕ್ರಿಯೆ ಸ್ಥಗಿತಗೊಂಡಿರುವುದು ಬೆಲೆ ಕುಸಿತಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ಭಾಗದ ಬಾಳೆಹಣ್ಣುಗಳು ಕೇರಳದ ಮೂಲಕ ಅರಬ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು.
ಆದ್ರೆ ಈಗ ರಫ್ತು ಸಾಧ್ಯವಾಗದ ಕಾರಣ ಆ ಹಣ್ಣುಗಳು ಎಗಳು ಕೂಡ ಸ್ಥಳೀಯ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದು ಹಣ್ಣಿನ ಲಭ್ಯತೆ ಹೆಚ್ಚಾಗಿ ಬೆಲೆ ಮತ್ತಷ್ಟು ಕುಸಿದಿದೆ ಎನ್ನಲಾಗಿದೆ. ಆದ್ರೆ ಈ ಬೆಲೆ ಇಳಿಕೆ ಬಹಳ ದಿನಗಳ ಕಾಲ ಇರುವುದಿಲ್ಲ ಎಂದೂ ವರ್ತಕರು ಅಭಿಪ್ರಾಯಪಟ್ಟಿದ್ದಾರೆ. ಜೂನ್ ಅಥವಾ ಜುಲೈ ತಿಂಗಳ ವೇಳೆಗೆ ಮೆಟ್ಟೂರಿನಿಂದ ಬರುತ್ತಿರುವ ಬಾಳೆಹಣ್ಣಿನ ಪೂರೈಕೆ ಸ್ಥಗಿತಗೊಳ್ಳಲಿದೆ. ಆ ಸಮಯದಲ್ಲಿ ಕರ್ನಾಟಕದ ಒಳಗಿನಿಂದ ಉತ್ತಮ ಗುಣಮಟ್ಟದ ಹಣ್ಣುಗಳು ಮಾರುಕಟ್ಟೆಗೆ ಬರಲಿವೆ. ಇದರಿಂದಾಗಿ ಬಾಳೆಹಣ್ಣಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.























