Home Advertisement
Home ಸಿನಿ ಮಿಲ್ಸ್ ‘ಜನ ನಾಯಗನ್ʼ: ₹500 ಕೋಟಿ ಸಿನಿಮಾಗೆ ಪೈರಸಿ ಪೆಟ್ಟು, ವಿಜಯ್ ಕೊನೆಯ ಸಿನಿಮಾದ ದೃಶ್ಯಗಳು ಸೋರಿಕೆ!

‘ಜನ ನಾಯಗನ್ʼ: ₹500 ಕೋಟಿ ಸಿನಿಮಾಗೆ ಪೈರಸಿ ಪೆಟ್ಟು, ವಿಜಯ್ ಕೊನೆಯ ಸಿನಿಮಾದ ದೃಶ್ಯಗಳು ಸೋರಿಕೆ!

0
73

ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ ಧ್ರುವತಾರೆ ದಳಪತಿ ವಿಜಯ್ ನಟನ ವೃತ್ತಿಯ ಅಂತಿಮ ಸಿನಿಮಾ ಎನ್ನಲಾದ ‘ಜನ ನಾಯಗನ್’ (Jananayagan) ಚಿತ್ರಕ್ಕೆ ಸಂಕಷ್ಟಗಳು ಬೆನ್ನೇರಿ ಬಂದಿವೆ. ಜನವರಿ 9ಕ್ಕೆ ನಿಗದಿಯಾಗಿದ್ದ ಬಿಡುಗಡೆ ದಿನಾಂಕವು, ಕೆಲವು ಕಾನೂನು ಕಾರಣಗಳಿಂದ ವಿಳಂಬವಾಗುತ್ತಿರುವ ಬೆನ್ನಲ್ಲೇ, ಚಿತ್ರದ ಅತೀ ಮುಖ್ಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಾಹಿತಿಯ ಪ್ರಕಾರ ಸುಮಾರು 5 ನಿಮಿಷಗಳ ಸುದೀರ್ಘ ವಿಡಿಯೋ ಕ್ಲಿಪ್ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಇದರಲ್ಲಿ ವಿಜಯ್ ಪಾತ್ರದ ಸಖತ್‌ ಅದ್ದೂರಿಯಾಗಿ ಪರಿಚಯಿಸಿ ಮತ್ತು ಸಿನಿಮಾದ ಶೀರ್ಷಿಕೆಯನ್ನು ಅನಾವರಣಗೊಳಿಸುವ ಪ್ರಮುಖ ಸನ್ನಿವೇಶಗಳಿವೆ. ವಿಜಯ್ ತಮ್ಮ ಸಿನಿ ಪಯಣ ಮುಗಿಸಿ ಪೂರ್ಣಾವಧಿಯ ರಾಜಕಾರಣಿಯಾಗಿ ಹೊರಹೊಮ್ಮುತ್ತಿರುವ ಈ ಹಂತದಲ್ಲಿ, ಕೊನೆಯ ಚಿತ್ರದ ದೃಶ್ಯಗಳು ಈ ರೀತಿ ಸೋರಿಕೆಯಾಗಿರುವುದು ಸಿನಿಪ್ರಿಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಚಿತ್ರದ ಸಂಕಲನ ನಡೆಯುತ್ತಿರುವ ಹಂತದಲ್ಲಿಯೇ ಈ ವಿಡಿಯೋ ಹೊರಬಂದಿರುವುದು ಚಿತ್ರತಂಡದ ಭದ್ರತೆಯ ಬಗ್ಗೆ ಪ್ರಶ್ನೆ ಎತ್ತಿದೆ.

ಹಾಗೇ ಈ ಆಘಾತಕಾರಿ ಬೆಳವಣಿಗೆಯ ಬಗ್ಗೆ ನಟ ಸಿ.ಬಿ. ಸತ್ಯರಾಜ್ ಪ್ರತಿಕ್ರಿಯಿಸಿದ್ದು, “ಒಂದು ಚಿತ್ರವನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಹಣ ಮತ್ತು ನೂರಾರು ಜನರ ಶ್ರಮ ಬೇಕಾಗುತ್ತದೆ. ಇಂತಹ ಕೃತ್ಯಗಳು ಚಿತ್ರೋದ್ಯಮಕ್ಕೆ ಮಾರಕ. ಯಾರೂ ಇಂತಹ ವಿಡಿಯೋಗಳನ್ನು ವೀಕ್ಷಿಸಬೇಡಿ ಮತ್ತು ಹಂಚಿಕೊಳ್ಳಬೇಡಿ,” ಎಂದು ಮನವಿ ಮಾಡಿದ್ದಾರೆ. ಖ್ಯಾತ ಚಿತ್ರ ವಿಮರ್ಶಕ ಅಮುತ ಭಾರತಿ ಪ್ರಕಾರ, ₹400 ರಿಂದ ₹500 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಮೇಲೆ ವಿತರಕರು ಮತ್ತು ನಿರ್ಮಾಪಕರು ಭಾರಿ ನಂಬಿಕೆ ಇಟ್ಟಿದ್ದಾರೆ. ಇಂತಹ ಸಮಯದಲ್ಲಿ ಪೈರಸಿ ಆದ್ರೆ ಚಿತ್ರದ ಬಾಕ್ಸ್ ಆಫೀಸ್ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದರು.

ನಂತರ ಸೋರಿಕೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ವಿಜಯ್ ಫ್ಯಾನ್ಸ್‌ಗಳೆಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಕೂಡಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಒಟ್ಟಾರೆ.. ಈಗ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಪಡೆದು, ಅತೀ ಶೀಘ್ರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದೇ ಸೂಕ್ತ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಇದೆಲ್ಲದರ ಬಗ್ಗೆ ವಿಜಯ್‌ ದಳಪತಿಯ ನಿಲುವು ಏನು ಮತ್ತು ಈ ಗೊಂದಲದ ಕುರಿತು ವಿಜಯ್‌ ಇನ್ನೂ ಯಾವ ಹೇಳಿಕೆಯನ್ನು ನೀಡಿಲ್ಲ.