ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ 15 ವರ್ಷದ ಬಾಲಕಿ ಶ್ರಿನಂದಾ ನಿಗೂಢವಾಗಿ ನಾಪತ್ತೆಯಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿರುವ ಘಟನೆ ದುಃಖದ ವಾತಾವರಣ ಸೃಷ್ಟಿಸಿದೆ.
2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಪತ್ತೆ: ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಾಧಾರ ಪ್ರದೇಶದ ಸಮೀಪ ಸುಮಾರು 2000 ಅಡಿ ಆಳದ ಕಂದಕದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಪೊಲೀಸರು ಹಾಗೂ ರಕ್ಷಣಾ ತಂಡಗಳು ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಈ ದುರಂತ ಬೆಳಕಿಗೆ ಬಂದಿದೆ.
ಶೋಧ ಕಾರ್ಯಾಚರಣೆ: ಬಾಲಕಿ ಕಾಣೆಯಾಗಿದ್ದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯರು ಶೋಧ ಕಾರ್ಯದಲ್ಲಿ ತೊಡಗಿದ್ದರು ದುರ್ಗಮ ಪ್ರದೇಶವಾಗಿದ್ದರಿಂದ ಕಾರ್ಯಾಚರಣೆ ಕಷ್ಟಕರವಾಗಿತ್ತು. ಹಲವು ದಿನಗಳ ಹೋರಾಟವು ಅಂತಿಮವಾಗಿ ಶೋಧ ಕಾರ್ಯಾಚರಣೆಗೆ ಫಲ ನೀಡಿದರೂ, ಅದು ದುಃಖದ ಸುದ್ದಿಯನ್ನೇ ತಂದಿದೆ.
ಕುಟುಂಬಸ್ಥರ ಆಕ್ರಂದನ: ಮೃತದೇಹ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತು. ಸ್ಥಳದಲ್ಲಿ ಮನಕಲಕುವ ದೃಶ್ಯಗಳು ಕಂಡುಬಂದಿದ್ದು, ಪ್ರವಾಸಿ ಪ್ರದೇಶದಲ್ಲಿ ಭಾರೀ ಆಘಾತ ಉಂಟಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ನಿಖರ ಕಾರಣ ತಿಳಿಯಲು ತನಿಖೆ ಮುಂದುವರೆಸಿದ್ದಾರೆ.






















