Home Advertisement
Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ: ಇಂದಿನಿಂದ `ಸಂಯುಕ್ತ ಕರ್ನಾಟಕ’ ಆರೋಗ್ಯ-ಶಿಕ್ಷಣ ಮೇಳ

ಕಲಬುರಗಿ: ಇಂದಿನಿಂದ `ಸಂಯುಕ್ತ ಕರ್ನಾಟಕ’ ಆರೋಗ್ಯ-ಶಿಕ್ಷಣ ಮೇಳ

0
116

ಖ್ಯಾತ ಶಿಕ್ಷಣ ತಜ್ಞರ ಮಾರ್ಗದರ್ಶನ | ಬೃಹತ್ ಹೆಲ್ತ್ ಕ್ಯಾಂಪ್ | ಕಲ್ಯಾಣ ಕರ್ನಾಟಕ ಪ್ರಗತಿಗೆ ಉತ್ತೇಜನ

ಸಂ.ಕ.ಸಮಾಚಾರ ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಮತ್ತು ಆರೋಗ್ಯ ಪ್ರಗತಿಗೆ ಪೂರಕವಾಗಿ ಲೋಕ ಶಿಕ್ಷಣ ಟ್ರಸ್ಟಿನ ಹೆಮ್ಮೆಯ ಪ್ರಕಟಣೆ “ಸಂಯುಕ್ತ ಕರ್ನಾಟಕ” ಪತ್ರಿಕೆಯಿಂದ ಕಲಬುರಗಿ ನಗರದ ಖಮಿತಕರ್ ಭವನದಲ್ಲಿ ಮಂಗಳವಾರ, ಬುಧವಾರ ಬೃಹತ್ ಆರೋಗ್ಯ-ಶಿಕ್ಷಣ ಮೇಳ ಆಯೋಜಿಸಿದ್ದು, ಸಕಲ ಸಿದ್ಧತೆ ಮಾಡಲಾಗಿದೆ.

ಸಿರಿ ಸಂಪದ ಮೇಳದಲ್ಲಿ ನಾಡಿನ ಪ್ರತಿಷ್ಠಿತ 20 ಶಿಕ್ಷಣ ಸಂಸ್ಥೆ, 10 ಆಸ್ಪತ್ರೆಗಳು ಭಾಗಿಯಾಗಿದ್ದು, ಸುಸಜ್ಜಿತ 30 ಮಳಿಗೆಗಳು ತಲೆ ಎತ್ತಿವೆ. ಕಲಬುರಗಿ ಕಾಮರೆಡ್ಡಿ ಆಸ್ಪತ್ರೆ ಆರೋಗ್ಯ ಮೇಳದ ಮತ್ತು ಭಾಲ್ಕಿ ಕರಡ್ಯಾಳನ ಶ್ರೀ ಚನ್ನಬಸವೇಶ್ವರ ಪಿಯುಸಿ ವಿಜ್ಞಾನ ಕಾಲೇಜು ಶಿಕ್ಷಣ ಮೇಳದ ಪ್ರಧಾನ ಪ್ರಾಯೋಜಕತ್ವ ವಹಿಸಿಕೊಂಡಿವೆ.

ಈ ಭಾಗದ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಬಳಿಕ ಮುಂದೇನು? ವೃತ್ತಿಪರ ಕೋರ್ಸ್ ಆಯ್ಕೆ, ಸ್ಪರ್ಧಾತ್ಮಕ-ನಾಗರಿಕ ಸೇವಾ ಪರೀಕ್ಷೆ ಸಿದ್ಧತೆ ಬಗ್ಗೆ ಖ್ಯಾತ ಶಿಕ್ಷಣ ತಜ್ಞರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ, ಪ್ರೇರಣೆ ತುಂಬಲಿದ್ದಾರೆ.

ಏ.7ರAದು ಬೆಳಿಗ್ಗೆ 10.30ಕ್ಕೆ ಮೇಳಕ್ಕೆ ಚಾಲನೆ ಸಿಗಲಿದೆ. ಬಳಿಕ ಮಧ್ಯಾಹ್ನ 12.30ಕ್ಕೆ ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ “ಶಿಕ್ಷಣ-ಬದುಕು-ಬಾಳು” ಕುರಿತು ಪ್ರೇರಣಾದಾಯಿ ಉಪನ್ಯಾಸ ನೀಡುವರು. ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿ ಅವರ ಸಂದೇಹ, ಗೊಂದಲ ತಿಳಿಗೊಳಿಸಲಿದ್ದಾರೆ. ಸಂಜೆ 4.30ಕ್ಕೆ ಖ್ಯಾತ ಕ್ಯಾನ್ಸರ್ ತಜ್ಞ ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಡಾ.ಶೇಖರ್ ಪಾಟೀಲ್ “ಕ್ಯಾನ್ಸರ್ ಭಯ, ಮಿಥ್ಯೆ, ಮುಂಜಾಗೃತೆ, ಚಿಕಿತ್ಸೆ” ಬಗ್ಗೆ ಉಪನ್ಯಾಸ ನೀಡುವರು. ಬಳಿಕ ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ಖ್ಯಾತ ನರರೋಗ ತಜ್ಞ ಡಾ.ಶಿವಕುಮಾರ ಕುಪನೂರ ಉಪನ್ಯಾಸ ನೀಡಿ ಸಂವಾದ ನಡೆಸುವರು.

8ರಂದು ಮಧ್ಯಾಹ್ನ 12ಕ್ಕೆ ಖ್ಯಾತ ಲೇಖಕರು, ರಾಜ್ಯ ಪೊಲೀಸ್ ಇಲಾಖೆ ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ “ಸ್ಪರ್ಧಾತ್ಮಕ ಪರೀಕ್ಷೆ: ಸಿದ್ಧತೆ-ಸವಾಲು” ಕುರಿತು ಉಪನ್ಯಾಸ ನೀಡಿ, ನಾಗರಿಕ ಸೇವಾ ಪರೀಕ್ಷೆ ಸಿದ್ಧತೆಯಲ್ಲಿರುವವರಿಗೆ ಸ್ಫೂರ್ತಿ ನೀಡುವರು. ಮಧ್ಯಾಹ್ನ 3.30ಕ್ಕೆ “ಥಟ್ ಅಂತ ಹೇಳಿ” ಖ್ಯಾತಿಯ ಹಿರಿಯ ವೈದ್ಯ ಸಾಹಿತಿ, ಚಿಂತಕ ಡಾ.ನಾ.ಸೋಮೇಶ್ವರ ರಸಪ್ರಶ್ನೆ ನಡೆಸಿಕೊಡುವರು.

ಇನ್ನು 7ರಂದು ಸಂಜೆ 6ಕ್ಕೆ ಖ್ಯಾತ ಕಲಾವಿದ ಅನಂತ ಕುಲಕರ್ಣಿ ಅವರಿಂದ ದಾಸವಾಣಿ, ವಚನ ಗಾಯನ ಸುಧೆ ಹರಿಯಲಿದೆ. 8ರಂದು ಸಂಜೆ 6ಕ್ಕೆ ಹಾಸ್ಯಬ್ರಹ್ಮ ಗಂಗಾವತಿ ಪ್ರಾಣೇಶ್(ಬೀಚಿ) ತಂಡ ಹಾಸ್ಯ ಸಂಜೆ ನೀಡಲಿದೆ. ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ, ಧರ್ಮದರ್ಶಿಗಳಾದ ಯು.ಬಿ.ವೆಂಕಟೇಶ, ಡಾ.ಗುರುರಾಜ ಕರ್ಜಗಿ, ಕೇಶವ ದೇಸಾಯಿ, ಡಿ.ಆರ್.ಪಾಟೀಲ್, ಕಾರ್ಯದರ್ಶಿ ಹರಿಚನ್ನಕೇಶವ, ಸಿಇಒ ಮೋಹನ ಹೆಗಡೆ, ಸಂಪಾದಕರಾದ ಮಹಾಬಲ ಸೀತಾಳಬಾವಿ ಮಾರ್ಗದರ್ಶನದಲ್ಲಿ ಪತ್ರಿಕೆ ತಂಡ ಎರಡು ವಾರಗಳಿಂದ ಅಚ್ಚುಕಟ್ಟಾಗಿ ಮೇಳ ಆಯೋಜನೆ ಸಿದ್ಧತೆ ಕೈಗೊಂಡಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೇಳದ ಸದ್ಬಳಕೆ ಮಾಡಿಕೊಳ್ಳಲು ಕೋರಲಾಗಿದೆ.

ಆರೋಗ್ಯದಿಂದ ಸಮೃದ್ಧಿ ಶಿಕ್ಷಣದಿಂದ ಅಭಿವೃದ್ಧಿ: ಆರೋಗ್ಯ, ಶಿಕ್ಷಣ ಸಂಬಂಧ ಅರ್ಥಪೂರ್ಣ ಉಪನ್ಯಾಸ, ಸಂವಾದ, ರಸಪ್ರಶ್ನೆ, ಚಿಂತನ-ಮಂಥನ ನಡೆಯಲಿವೆ. ಹಾಸ್ಯದ ಹೊನಲು, ಸಾಂಸ್ಕೃತಿಕ ವೈಭವಕ್ಕೂ ಮೇಳ ವೇದಿಕೆಯಾಗಲಿದೆ. ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. “ಆರೋಗ್ಯದಿಂದ ಸಮೃದ್ಧಿ-ಶಿಕ್ಷಣದಿಂದ ಪ್ರಗತಿ” ಎಂಬ ಘೋಷವಾಕ್ಯ ಸಾಕಾರಗೊಳಿಸಲು ಮೇಳ ಆಯೋಜಿಸಲಾಗಿದೆ.

ಮೇಳದಲ್ಲೇನಿದೆ: 2 ದಿನಗಳ ಮೇಳದಲ್ಲಿ 20 ಶಿಕ್ಷಣ ಸಂಸ್ಥೆಗಳು, 10 ವಿವಿಧ ಆಸ್ಪತ್ರೆಗಳು ಭಾಗಿಯಾಗಲಿವೆ ಎಸೆಸ್ಸೆಲ್ಸಿ, ಪಿಯುಸಿಬಳಿಕ ಮುಂದೇನು ಎನ್ನುವ ವಿದ್ಯಾರ್ಥಿಗಳ ಪ್ರಶ್ನೆಗೆ ಸೂಕ್ತ ಮಾರ್ಗದರ್ಶನ ಸ್ಪರ್ಧಾತ್ಮಕ ಪರೀಕ್ಷೆ, ವೃತ್ತಿಪರ ಕೋರ್ಸ್‌ಗಳ ಕುರಿತು ಮಾಹಿತಿ ಸಿಗಲಿದೆ