Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಉಪಚುನಾವಣೆ ಕದನ ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆ – ವಿಜಯೇಂದ್ರ

ಉಪಚುನಾವಣೆ ಕದನ ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆ – ವಿಜಯೇಂದ್ರ

0
94

ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ತೀವ್ರ ಗಮನ ಸೆಳೆದಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊಟ-ನಿದ್ರೆ ಬಿಟ್ಟು ಪ್ರಚಾರದಲ್ಲಿ ತೊಡಗಿರುವುದೇ ಕಾಂಗ್ರೆಸ್ ಸರ್ಕಾರದ ಸಂಕಷ್ಟದ ಸ್ಥಿತಿಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ಅಭಿವೃದ್ಧಿ ಇಲ್ಲ, ಗ್ಯಾರಂಟಿ ಮಾತ್ರ – ಆರೋಪ : ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಗ್ಯಾರಂಟಿ ಯೋಜನೆಗಳನ್ನು ಅಭಿವೃದ್ಧಿಯಂತೆ ಬಿಂಬಿಸುವ ಮೂಲಕ ವೈಫಲ್ಯವನ್ನು ಮುಚ್ಚಲು ಪ್ರಯತ್ನಿಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದರು.

“ಅನುಭವ ಬಳಸಿಕೊಳ್ಳಲಿಲ್ಲ” : “17 ಬಜೆಟ್ ಮಂಡಿಸಿದ ಅನುಭವ ಇರುವ ಮುಖ್ಯಮಂತ್ರಿಗಳಿಗೆ ಇದು ಸುವರ್ಣ ಅವಕಾಶವಾಗಿತ್ತು. ಆದರೆ ಆ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗಿಲ್ಲ,” ಎಂದು ಸಿದ್ದರಾಮಯ್ಯ ವಿರುದ್ಧ ಟೀಕಿಸಿದರು.

ಅಹಿಂದ, ಅಲ್ಪಸಂಖ್ಯಾತರ ಬಗ್ಗೆ ಟೀಕೆ : ಅಹಿಂದ ಸಮುದಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನಂತರ ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಲಾಗಿದೆ. ಇತ್ತೀಚೆಗೆ ಅಲ್ಪಸಂಖ್ಯಾತರಲ್ಲೂ ಅಸಮಾಧಾನ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಉಪಚುನಾವಣೆ ‘ಕಬ್ಬಿಣದ ಕಡಲೆ’ : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್‌ಗೆ ಸವಾಲಾಗಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ತಮ್ಮ ಸಚಿವರಿಗೆ ಪ್ರಚಾರದ ಟಾಸ್ಕ್ ನೀಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಬಿಜೆಪಿ ವಿಶ್ವಾಸ : ತಾವು ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಸಂಚರಿಸಿ ಮತದಾರರ ಅಭಿಪ್ರಾಯ ತಿಳಿದುಕೊಂಡಿದ್ದು, ಬಿಜೆಪಿ ಪರ ಉತ್ತಮ ವಾತಾವರಣ ಇದೆ ಎಂದು ಹೇಳಿದರು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಅವರು 50 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.