ಮುಂಬೈ: ಭಾರತೀಯ ಸಂಸ್ಕೃತಿ, ಕಲೆ ಮತ್ತು ವೈಭವದ ಪ್ರತೀಕವಾಗಿ ಗುರುತಿಸಿಕೊಂಡಿರುವ ನೀತಾ ಅಂಬಾನಿ ಅವರು ಮತ್ತೊಮ್ಮೆ ತಮ್ಮ ವೈವಿಧ್ಯಮಯ ಸೀರೆ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್‌ಎಂಎಸಿಸಿ) ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಐವರಿ-ಗೋಲ್ಡ್ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರು.
ಸಾಂಪ್ರದಾಯಿಕ ಸೀರೆ, ಆಧುನಿಕ ಮೆರಗು : ಈ ವಿಶೇಷ ಕಾರ್ಯಕ್ರಮಕ್ಕೆ ಪತಿ ಮುಕೇಶ್ ಅಂಬಾನಿ ಅವರೊಂದಿಗೆ ಆಗಮಿಸಿದ ನೀತಾ ಅಂಬಾನಿ, ಹೊನ್ನಿನ ನೂಲುಗಳಿಂದ ನೇಯ್ದ ಐವರಿ ಬಣ್ಣದ ಕಾಂಜೀವರಂ ಸೀರೆಯನ್ನು ಧರಿಸಿದ್ದರು. ಇದರ ಅಂಚಿನಲ್ಲಿ ಮರೂನ್ ಕೆಂಪು ಬಣ್ಣದ ವಿನ್ಯಾಸವು ಸೀರೆಗೆ ಹೆಚ್ಚುವರಿ ಶೋಭೆ ನೀಡಿತ್ತು.
ಈ ಸೀರೆ ಕೈಮಗ್ಗದಲ್ಲಿ ನಿಪುಣ ಕುಶಲಕರ್ಮಿ ಆರ್. ವರಧನ್ ಅವರು ನೇಯ್ದಿದ್ದು, ಇದನ್ನು ತಯಾರಿಸಲು ಸುಮಾರು ನಾಲ್ಕು ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ಜರಿ ಕಸೂತಿ ಮತ್ತು ನಯವಾದ ಮೇಲ್ಮೈ ಈ ಸೀರೆಗೆ ವಿಶೇಷ ಮೌಲ್ಯ ನೀಡಿವೆ.
ಆಭರಣಗಳಲ್ಲಿ ವೈಭವ : ನೀತಾ ಅಂಬಾನಿ ತಮ್ಮ ಸೀರೆಯೊಂದಿಗೆ ಬರ್ಮಾ ರೂಬಿ ಅಲಂಕೃತ ಚಿನ್ನದ ಮಾವಿನ ಸರ, ರೂಬಿ ಮತ್ತು ಬಸ್ರಾ ಮುತ್ತಿನ ಕರ್ಣಾಭರಣ ಧರಿಸಿ ಪರಂಪರೆಯ ಶೈಲಿಗೆ ಆಧುನಿಕ ಸ್ಪರ್ಶ ನೀಡಿದರು.
ಕಲೆ-ಸಂಸ್ಕೃತಿಗೆ ಗೌರವ: ಎನ್‌ಎಂಎಸಿಸಿ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪಿಂಕ್ ಕಾರ್ಪೆಟ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಜಾಗತಿಕ ವೇದಿಕೆಗೆ ತಲುಪಿಸಲು ಸಹಕರಿಸಿದ ಕಲಾವಿದರು ಮತ್ತು ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.
“ಸಂಖ್ಯೆ 3″ರ ಸಾಂಸ್ಕೃತಿಕ ಮಹತ್ವ : ಈ ವೇಳೆ ಅವರು “ಸಂಖ್ಯೆ 3″ರ ಸಾಂಸ್ಕೃತಿಕ ಮಹತ್ವವನ್ನು ಉಲ್ಲೇಖಿಸಿ ತ್ರಿಮೂರ್ತಿಗಳು: ಬ್ರಹ್ಮ, ವಿಷ್ಣು, ಮಹೇಶ್, ತ್ರಿದೇವಿಯರು: ಸರಸ್ವತಿ, ಲಕ್ಷ್ಮಿ, ಕಾಳಿ, ತ್ರಿವೇಣಿ ಸಂಗಮ: ಗಂಗಾ, ಯಮುನಾ, ಸರಸ್ವತಿ. ಇವುಗಳ ಮೂಲಕ ಭಾರತೀಯ ಪರಂಪರೆಯ ಆಳವನ್ನು ಪ್ರತಿಪಾದಿಸಿದರು.
ಈ ಕಾರ್ಯಕ್ರಮದ ನಂತರ ನೀತಾ ಅಂಬಾನಿಯ ಸೀರೆ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಫ್ಯಾಷನ್ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತೀಯ ಹಸ್ತಕುಶಲತೆಗೆ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಗುರುತಿನ ಮುದ್ರೆ ಬಿದ್ದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




















