ದಾವಣಗೆರೆ: ರಾಜ್ಯದ ಎಲ್ಲಾ ಸಚಿವರು ಉಪಚುನಾವಣೆ ಪ್ರಚಾರದಲ್ಲಿ ತೊಡಗಿರುವುದರಿಂದ ವಿಧಾನಸೌಧ ಸಂಪೂರ್ಣ ಖಾಲಿಯಾಗಿರುವುದು ಆಡಳಿತ ವೈಫಲ್ಯದ ಸೂಚನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಭಾನುವಾರ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಚಿವರನ್ನು ಪ್ರಚಾರಕ್ಕೆ ನಿಯೋಜಿಸಿದ್ದನ್ನು ನಾನು ಟೀಕಿಸುವುದಿಲ್ಲ. ಆದರೆ ಜನಪರ ಆಡಳಿತ ನೀಡಿದ್ದರೆ ಎಲ್ಲರೂ ಕ್ಷೇತ್ರಕ್ಕೆ ಓಡಿಹೋಗುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದರು.
“ವಿಧಾನಸೌಧವೇ ಖಾಲಿ” : ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಸಚಿವರು ಹಾಗೂ ಕಾಂಗ್ರೆಸ್ ನಾಯಕರು ದೊಡ್ಡ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿರುವುದರಿಂದ ಆಡಳಿತ ಯಂತ್ರ ಕುಂಠಿತವಾಗಿದೆ ಎಂದು ಅವರು ಆರೋಪಿಸಿದರು. ಅಲ್ಲದೇ, ದೆಹಲಿಯಿಂದ ಪಕ್ಷದ ಹೈಕಮಾಂಡ್ ಪ್ರತಿನಿಧಿಗಳೂ ರಾಜ್ಯದಲ್ಲೇ ನೆಲೆಸಿರುವುದು ಸೋಲಿನ ಭಯದ ಸೂಚನೆ ಎಂದರು.
ಉಪಚುನಾವಣೆಯ ರಾಜಕೀಯ ಕಾವು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ತಾವು ಪ್ರಚಾರ ನಡೆಸಿದ ಅನುಭವ ಹಂಚಿಕೊಂಡ ಅವರು, “ಕಾಂಗ್ರೆಸ್ ವಿರುದ್ಧ ಅಲೆ ಇದೆ. ಎನ್‌ಡಿಎ ಅಭ್ಯರ್ಥಿಗಳಿಗೆ ಜನರ ಬೆಂಬಲ ಸ್ಪಷ್ಟವಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಟುಂಬ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ : ಕುಟುಂಬ ರಾಜಕಾರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, “ನಾವು ರಾಜಕಾರಣಕ್ಕೆ ಸ್ವಯಂ ಬಂದವರಲ್ಲ, ಜನರ ಒತ್ತಾಯದಿಂದ ಬಂದವರು. ನಿಮ್ಮ ಕುಟುಂಬದಲ್ಲಿಯೂ ರಾಜಕಾರಣದ ಉದಾಹರಣೆಗಳಿವೆ” ಎಂದು ಕಟುವಾಗಿ ಪ್ರತಿಕ್ರಿಯಿಸಿದರು.





















