Home Advertisement
Home ಅಂಕಣ ಅಂಕಣ ಬರಹ: ಅರಣ್ಯ ಸಾಗುವಳಿದಾರರ ಗೋಳು ಮುಂದಿನ ಜನ್ಮಕ್ಕೆ!

ಅಂಕಣ ಬರಹ: ಅರಣ್ಯ ಸಾಗುವಳಿದಾರರ ಗೋಳು ಮುಂದಿನ ಜನ್ಮಕ್ಕೆ!

0
27

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ನಮ್ಮ ಆತಂಕ, ಬದುಕಿನ ಅನಿಶ್ಚಿತತೆ, ಸಂಕಟ ಬಹುಶಃ ಈ ಜನ್ಮದಲ್ಲಿ ತಪ್ಪಿದ್ದಲ್ಲ. ಮಲೆನಾಡು, ಅರೆಮಲೆನಾಡು ಮತ್ತು ಕಾಡಂಚಿನ ಜನರಿಗೆ ಈಗ ಹೀಗೆ ಅನಿಸಿಬಿಟ್ಟಿದೆ. ತಮ್ಮ ಪಾಲಿಗೆ ಯಾವ ನಾಯಕರು, ಸರ್ಕಾರ, ಅಧಿಕಾರಿ, ನ್ಯಾಯಾಲಯ ಕೂಡ ರಕ್ಷಣೆಗೆ ಬರುವುದಿಲ್ಲ ಎನ್ನುವ ಹತಾಶೆ ಇವರ ಮನಗಳಲ್ಲಿ ಅಚ್ಚೊತ್ತಿದೆ! ರಾಜ್ಯದಲ್ಲಿ ಅರಣ್ಯ ಭೂಮಿ ಸಾಗುವಳಿದಾರರ ಭಯಭೀತಿಗೆ ಕಾರಣಗಳಿವೆ. ಈಗ ಮತ್ತೆ ಸುಮಾರು 2 ಲಕ್ಷಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವ ಸುಮಾರು 35 ಲಕ್ಷಕ್ಕೂ ಅಧಿಕ ಬಡವರಿಗೆ ಒಕ್ಕಲೇಳುವ ಆತಂಕ ಎದುರಾಗಿದೆ.

3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವ 86,332 ಬಡವರ 1.15 ಲಕ್ಷ ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಗುಡ್ಡಗಾಡು, ಪರಿಶಿಷ್ಟ ಪಂಗಡ, ಸಮಾಜದಿಂದ ಏನನ್ನೂ ಪಡೆಯದ ಹಾಗೂ ನಿರೀಕ್ಷಿಸದ ಬುಡಕಟ್ಟು ಸಮುದಾಯ ಈಗ ತಮ್ಮ ನೆಲ ರಕ್ಷಣೆಗಾಗಿ ಕೂಗೆಬ್ಬಿಸುವಂತಾಗಿದೆ. ಅವರ ಬದುಕುಗಳಲ್ಲಿ ಹಾಹಾಕಾರ ಉಂಟಾಗಿದೆ.

ತಾವು ಸಾಗುವಳಿ ಮಾಡಿಕೊಂಡಿರುವ ಭೂಮಿಯನ್ನು ತಮ್ಮ ಹೆಸರಿಗೆ ದಾಖಲೆ ಮಾಡಿಕೊಡಿ ಎಂದು ಕೇಳುತ್ತಿರುವವರಲ್ಲಿ ಮೊದಲನೆಯವರು ಅರಣ್ಯದಂಚಿನ ನೀರು ಲಭ್ಯವಿದ್ದ ಜಾಗದಲ್ಲಿ ಸಾಗುವಳಿ ಮಾಡಿರುವ ಬಡಜನ. ಎರಡನೆಯವರು, ತಮ್ಮ ಜಮೀನು ಪಕ್ಕದ ಅರಣ್ಯ ಇಲಾಖೆಯ ಭೂದಾಖಲೆ ಹೊಂದಿರುವ ಜಮೀನುಗಳಲ್ಲಿ ಗುಂಟೆ, ಹತ್ತು ಗುಂಟೆ, ಎಕರೆ ಜಾಗವನ್ನು ಸಾಗುವಳಿಗಾಗಿ ವಡಾಯಿಸಿಕೊಂಡವರು; ಮೂರನೆಯವರು ಹತ್ತಾರು ಎಕರೆ ಅರಣ್ಯವನ್ನು ಕಡಿದು ಅತಿಕ್ರಮಿಸಿ ಪ್ಲಾಯಂಟೇಶನ್, ತೋಟ ಇತ್ಯಾದಿಗಳನ್ನು ಮಾಡಿರುವಂಥವರು.

ಇದು ದೇಶಾದ್ಯಂತ ಇರುವ ಸಮಸ್ಯೆ. ಜಾರ್ಖಂಡ, ಅಸ್ಸಾಂನಿಂದ ಹಿಡಿದು ಕೇರಳದ ಕನ್ಯಾಕುಮಾರಿಯವರೆಗೂ ಅರಣ್ಯದಂಚಿನ ಜನರ ಸಮಸ್ಯೆ. ಅರಣ್ಯದಲ್ಲಿ ಅಕ್ರಮ ವ್ಯವಹಾರ, ಬೇಟೆ, ಮತ್ತು ಅವ್ಯಾಹತ ಅತಿಕ್ರಮಣದ ಹಿನ್ನೆಲೆಯಲ್ಲಿ ದೇಶದಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ 1978ರಲ್ಲಿ ಜಾರಿಗೆ ಬಂತು. ಈ ಕಾಯ್ದೆಯಡಿ ಅರಣ್ಯಭೂಮಿ ಒತ್ತುವರಿ, ಅರಣ್ಯ ಅಕ್ರಮ ಪ್ರವೇಶ, ಶಿಕಾರಿ, ಮರಮುಟ್ಟುಗಳ ಕಡಿತ ಈ ಎಲ್ಲವುಗಳನ್ನೂ ಕಟ್ಟುನಿಟ್ಟಾಗಿ ನಿಷೇಧಿಸಲಾಯಿತು.

ಆದರೆ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ 1980ರ ಮೊದಲು ಅರಣ್ಯಭೂಮಿ ಅತಿಕ್ರಮಣ ಮಾಡಿರುವ ಸಾಗುವಳಿದಾರರ ಜಮೀನುಗಳನ್ನು ಕ್ರಮಬದ್ಧಗೊಳಿಸುವ ತೀರ್ಮಾನವನ್ನು ತೆಗೆದುಕೊಂದರು. ಜನ ನಿಟ್ಟುಸುರು ಬಿಟ್ಟರು. ಆ ನಂತರದ ಒತ್ತುವರಿಯನ್ನು ತೆರವುಗೊಳಿಸಲು ಕೆಲ ಮಹತ್ವದ ತಿದ್ದುಪಡಿ ತಂದರು. ಆದರೆ ಸರ್ಕಾರಿ ಕೆಂಪು ಪಟ್ಟಿ, ಆಳುವವರಿಗಿಲ್ಲದ ಇಚ್ಛಾಶಕ್ತಿ ಜನ ಅನುಭವಿಸದ್ದು ಇನ್ನಷ್ಟು ಸಂಕಟ…!

ಈ ಮಧ್ಯೆ ಸರ್ಕಾರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಪರಂಪರಾಗತವಾಗಿ ಎರಡು ಮೂರು ತಲೆಮಾರುಗಳಿಂದ ಅರಣ್ಯದಂಚಿಗೆ ವಾಸಿಸುತ್ತಿರುವ ಬುಡಕಟ್ಟು ಜನ ಹಾಗೂ ಹಿಂದುಳಿದ ವರ್ಗದವರು ಸಾಗುವಳಿ ಮಾಡಿಕೊಂಡಿರುವ ಜಮೀನನ್ನು ಸಕ್ರಮ ಮಾಡಲು ನಿರ್ಧರಿಸಲಾಯಿತು.

ಎಲ್ಲರ ಅಪೇಕ್ಷೆ ಇತ್ತು. ಈ ಎಲ್ಲ ಸಣ್ಣ ರೈತರಿಗೆ ಮತ್ತು ಗುಡ್ಡಗಾಡು ಜನರಿಗೆಲ್ಲ ಅರಣ್ಯಭೂಮಿ ತಮ್ಮ ಹೆಸರಿಗೆ ಭೂ ದಾಖಲೆಯಾಗುತ್ತದೆ ಎಂದು. ಕೆಲ ರಾಜ್ಯಗಳು ಇದನ್ನು ಈಡೇರಿಸಿದರೆ, ಕರ್ನಾಟಕ ಮಾತ್ರ ಒಂದಿಲ್ಲೊಂದು ಸಬೂಬು ಹೇಳುತ್ತ, ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೇ, ಕಾನೂನಿನ ತೊಡಕು- ಗೋಜಲುಗಳನ್ನು ಬಿಡಿಸದೇ ಈಗ ಜನರ ತಲೆ ಮೇಲೆ ಕಲ್ಲು ಚಪ್ಪಡಿ ಎಳೆಯುವ ಸ್ಥಿತಿಗೆ ತಂದಿಟ್ಟಿದೆ.

ಕರ್ನಾಟಕದ ಸಮಸ್ಯೆ ಮತ್ತೂ ಭಿನ್ನ. ಶರಾವತಿ, ಕಾಳಿ, ವಾರಾಹಿ, ತುಂಗಭದ್ರಾ, ಕಾವೇರಿ ಜಲಾಶಯಗಳ ನಿರ್ಮಾಣಕ್ಕೆ ಜಮೀನು- ಮನೆ ಕಳೆದುಕೊಂಡ ಸಂತ್ರಸ್ತರಿಗೆಲ್ಲ ಇದೇ ಅರಣ್ಯ ಭೂಮಿಯಲ್ಲಿ ಆಶ್ರಯ ನೀಡಲಾಗಿತ್ತು. ದೇಶಕ್ಕಾಗಿ, ಈ ನಾಡಿಗಾಗಿ ತ್ಯಾಗ ಮಾಡಿದ ಜನರಿಗೂ, ಇಂದಿನವರಿಗೂ ಈ ಅರಣ್ಯ ಕಾಯ್ದೆ ಮತ್ತು ನ್ಯಾಯಾಲಯದ ತೀರ್ಪುಗಳು, ಕಾನೂನು ತೊಡಕುಗಳು ಅತಂತ್ರವಾಗಿಸಿವೆ.ಅವರಿಗೂ ಕೂಡ ಇಂದಿಗೂ ಒಂದು ತುಂಡು ಜಮೀನು ಅವರ ಹೆಸರಿನಲ್ಲಿ ಇಲ್ಲ. ಬೇರೆ ರಾಜ್ಯಗಳಲ್ಲಿ ಕಾಲಮಿತಿಯಲ್ಲಿ ಅರಣ್ಯ ಅತಿಕ್ರಮಣದಾರರಿಗೆ ಸಾಗುವಳಿ ಚೀಟಿ ಕೊಟ್ಟು, ಮತ್ತಷ್ಟು ಅತಿಕ್ರಮಣ ಆಗದಂತೆ ತಡೆದರೆ, ಕರ್ನಾಟಕದಲ್ಲಿ ಮಾತ್ರ ಅರಣ್ಯ ಸಂರಕ್ಷಣಾ ಕಾಯ್ದೆ ಬಂದ ನಂತರವೇ ರಾಜಕಾರಣಿಗಳು, ದೊಡ್ಡ ದೊಡ್ಡ ಎಸ್ಟೇಟ್‌ದಾರರು, ಸ್ವತಃ ಅರಣ್ಯ ಅಧಿಕಾರಿಗಳು ಅತಿಕ್ರಮಣ ಮಾಡಿ ತೋಟ, ಕಾಫಿ, ತೆಂಗು ಪ್ಲಾಯಂಟೇಶನ್ ಬೆಳೆಸಿದರು. ಅವರ ಅತಿಕ್ರಮಣವೇ ಯಾವ ಸರ್ಕಾರವೂ ಸಾಮಾನ್ಯ ಜನರ ಹಿತಾಸಕ್ತಿಯನ್ನು ಗಮನಿಸದ ಹಾಗೆ ಮಾಡಿದ್ದು !

ಪಕ್ಷ, ಪಂಗಡವಿಲ್ಲದೇ ಎಲ್ಲ ಮಲೆನಾಡು ರಾಜಕಾರಣಿಗಳು ಅರಣ್ಯ ಅತಿಕ್ರಮಿಸಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ಅರಣ್ಯ ಕಾಯ್ದೆ ಕಟ್ಟುನಿಟ್ಟಾಗಿ ಖುಲ್ಲಾ ಪಡಿಸಿದರೆ, ರಾಜ್ಯ ಸರ್ಕಾರ ಮತ್ತು ಆಳುವ ಈ ಪ್ರಭಾವಿ ಮಂದಿ ಒಂದಿಲ್ಲೊಂದು ನೆಪ ಸೃಷ್ಟಿಸಿ ಮತ್ತಷ್ಟು ಕಾನೂನು ತೊಡಕುಗಳನ್ನು ಹೆಣೆದಿದ್ದಾರೆ. ಇಲ್ಲಿ ಸಂಕಷ್ಟಕ್ಕೆ ಒಳಗಾದವರು ಸಾಮಾನ್ಯ ರೈತರು, ಧ್ವನಿ ಇಲ್ಲದ ಬುಡಕಟ್ಟು ಸಮುದಾಯದವರು.

ಕೆಲ ಸಂಘಟನೆಗಳು ರಾಜ್ಯಾದ್ಯಂತ ನಡೆಸಿದ ತೀವ್ರ ಆಂದೋಲನದ ಪರಿಣಾಮ 2015ರಲ್ಲಿ 3 ಎಕರೆಗಿಂತ ಹೆಚ್ಚು ಅತಿಕ್ರಮಣ ಮಾಡಿಕೊಂಡವರ ಭೂಮಿ ಖುಲ್ಲಾ ಬಿಡಿಸುವುದು ಮತ್ತು 10 ಎಕರೆಗಿಂತ ಹೆಚ್ಚು ಭೂಮಿ ಅತಿಕ್ರಮಿಸಿದವರನ್ನು ಖುಲ್ಲಾ ಪಡಿಸುವುದಕ್ಕೆ ಎಸ್‌ಐಟಿ ರಚನೆಯಾಯಿತು. ಎಸ್‌ಐಟಿ ಕೂಡ ಈ ಪ್ರಬಲ ಕೈಗೊಂಬೆಯಾಗಿ ದುರ್ಬಲರನ್ನೇ ಟಾರ್ಗೆಟ್ ಮಾಡಿತು. ಇನ್ನೊಂದೆಡೆ `ಒನ್ಸ್ ಇಟ್ ಈಸ್ ಎ ಫಾರೆಸ್ಟ್, ಆಲ್ವೇಸ್ ಇಟ್ ಈಸ್ ಫಾರೆಸ್ಟ್’ (ಒಮ್ಮೆ ಅದು ಅರಣ್ಯ ಭೂಮಿ ಎಂದಾದರೆ, ಅದು ಶಾಶ್ವತವಾಗಿ ಅರಣ್ಯ ಭೂಮಿಯೇ) ಎಂಬ ಸುಪ್ರೀಂ ಕೋರ್ಟ್ ಆದೇಶ ಬಂದು ರಾಜ್ಯದ ಅಧಿಕಾರಿಗಳು ಕೂಡ ನಿಸ್ಸಹಾಯಕರಾದರು.

ಈ ವೈಫಲ್ಯಕ್ಕೆ ಕಾರಣ ನೇರವಾಗಿ ಸರ್ಕಾರ ಮತ್ತು ಮಂತ್ರಿಗಳು. ಅರಣ್ಯ ಎಂಬುದೇ ಗೊತ್ತಿಲ್ಲದವರಿಗೆ, ಅರಣ್ಯ ಕಾಣದವರಿಗೆ ಅರಣ್ಯ ಮಂತ್ರಿಗಳಾಗಿ ಮಾಡಿ, ಅವರು ವಿಜೃಂಭಿಸುವಂತಾದ ಪರಿಣಾಮ, ಈ ಸಮಸ್ಯೆಗಳನ್ನು ಐಎಫ್‌ಎಸ್ ಅಧಿಕಾರಿಗಳು ಬಿಡಿಸಲೇ ಇಲ್ಲ. ಏಕೆಂದರೆ ಅವರಿಗೆ ಇನ್ನಷ್ಟು ಮೈಭಾರದ ಕೆಲಸ ಹಚ್ಚಿದ್ದರು. ಹಾಗೇ ಈ ಅರಣ್ಯ ಅತಿಕ್ರಮಣದಾರರಿಂದ ಯಾವ ಲಾಭವೂ ಅಧಿಕಾರಿಗಳಿಗಿಲ್ಲ. ಮೈಪರಚಿಕೊಳ್ಳುವುದಷ್ಟೇ. ಅದೇ ಸಾಮಿಲ್, ರೆಸಾರ್ಟ್ ಪರವಾನಗಿ, ಮರಮುಟ್ಟುಗಳ ಹರಾಜು, ಮೊನೊ ಕಲ್ಚರ್, ಅರಣ್ಯ ಸಂರಕ್ಷಣೆಯ ಬೇರೆ ಬೇರೆ ಕಾರ್ಯಕ್ರಮಗಳು, ಹೊಸ ಅರಣ್ಯ ನೆಡುವ, ಕಡಿಯುವ ಯೋಜನೆಗಳಿಂದ ಕಿಸೆ ಭರ್ತಿ! ಒಂದು ಕೋಟಿ ಗಿಡ ನೆಡುವ ಯೋಜನೆ ಎಂಬ ಘೋಷಣೆ ಪ್ರತಿ ವರ್ಷ ವನಮಹೋತ್ಸವದ ವೇಳೆ ಕೇಳಿ ಬರುತ್ತದೆ. ಸರ್ಕಾರ ವ್ಯಯಿಸಿದ ಹಣದಲ್ಲಿ ಇಡೀ ಕರ್ನಾಟಕವೇ ಹಸಿರುಮಯವಾಗಬೇಕಿತ್ತು. ಬದಲು, ಮತ್ತಷ್ಟು ಬರಡು ಭೂಮಿ ಹೆಚ್ಚುತ್ತಿದೆ. ದೇಶದಲ್ಲಿಯೇ ರಾಜಸ್ತಾನದ ನಂತರ ಅತೀ ಹೆಚ್ಚು ಒಣಭೂಮಿ ರಾಜ್ಯವಾಗಿ ಪರಿಣಮಿಸಿದೆ ಕರ್ನಾಟಕ. ಹೀಗೆ ಅಧಿಕಾರಿಗಳಿಗೆ ಸಹಾಯ ಮಾಡುವ ಯೋಜನೆಗಳಷ್ಟೇ ಮುನ್ನೆಲೆಗೆ ಬಂದು ಬಡ ಸಾಗುವಳಿದಾರರು ಕಣ್ಣು ಬಿಟ್ಟು ಕಾಯುವಂತಾಗಿದೆ.

ರಾಜ್ಯ ಸರ್ಕಾರವೇ ನೀಡಿರುವ ಅಂಕಿಸಂಖ್ಯೆ ಪ್ರಕಾರ, 3 ಎಕರೆಗಿಂತ ಕಡಿಮೆ ಒತ್ತುವರಿಯಾಗಿದ್ದು 1.15 ಲಕ್ಷ ಎಕರೆ. ಸುಮಾರು 7 ಲಕ್ಷ ಕುಟುಂಬಗಳು ಈ ಭೂಮಿಯನ್ನು ಅವಲಂಬಿಸಿವೆ. 3ರಿಂದ 10 ಎಕರೆಯವರೆಗಿನ 71 ಸಾವಿರ ಎಕರೆ ಸಾಗುವಳಿ ಪ್ರದೇಶವಾಗಿದೆ. ಸುಮಾರು 1 ಲಕ್ಷ ಜನ ಇದರ ಅವಲಂಬಿತರು. ಹತ್ತು ಎಕರೆಯಿಂದ 30 ಎಕರೆ ಹಾಗೂ ಇದಕ್ಕೂ ಅಧಿಕ ಇರುವ ಪ್ರಕರಣ ಸಾವಿರಕ್ಕೂ ಕಡಿಮೆ. ಆದರೆ ದೊಡ್ಡ ಒತ್ತುವರಿದಾರರೇ ಈ ಎಲ್ಲ ಸಮಸ್ಯೆಗಳಿಗೆ ಕಾರಣೀಭೂತರು.

ಯೋಚನೆ ಮಾಡಿ. ಶರಾವತಿ, ಕಾವೇರಿ, ಕಬಿನಿ, ತುಂಗಭದ್ರ, ಕಾಳಿ ಭಾಗದ ಜನ ಯಾರಿಗಾಗಿ ತ್ಯಾಗ ಮಾಡಬೇಕಿತ್ತು? ತ್ಯಾಗ ಮಾಡಿ ಅನುಭವಿಸಿದ ಫಲವೇನು? ಹಸಿವು ನೀರಡಿಕೆ ಬಿಟ್ಟು ದೇಶದ ಆಹಾರ ಸಮಸ್ಯೆಯನ್ನು ಬಗೆಹರಿಸಿದ ಮಂದಿ ಈಗ ಅನಾಥರಾಗಬೇಕಾಗಿದೆ.

ರಾಜ್ಯದ 1.15 ಲಕ್ಷ ಎಕರೆ ಅರಣ್ಯ ಭೂಮಿ ಸಾಗುವಳಿಯ ಸಣ್ಣ ರೈತರನ್ನು ಒಕ್ಕಲೆಬ್ಬಿಸಬಾರದು ಎನ್ನುವ ಕಾಳಜಿ ಮತ್ತು ಸಕ್ರಮಗೊಳಿಸುವ ಭರವಸೆಯನ್ನು ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ನೀಡಿತ್ತು. ಆದರೆ ಅಂತಹ ಶಿಫಾರಸೂ ಕೇಂದ್ರಕ್ಕೆ ಹೋಗಿಲ್ಲ. ಮತ್ತಷ್ಟು ನಿರ್ಲಕ್ಷ್ಯವೂ ನಿಂತಿಲ್ಲ. ಪರಿಣಾಮ ಇಂದೋ ನಾಳೆಯೋ ಅಮಾಯಕರ ತಲೆ ಮೇಲಿನ ತೂಗುಗತ್ತಿ ಏನು ಮಾಡೀತು ಗೊತ್ತಾಗುತ್ತಿಲ್ಲ! ಪರಿಸರ ಸಂಘಟನೆಯೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ 2.2 ಲಕ್ಷ ಎಕರೆ ಪ್ರದೇಶವನ್ನು ಖುಲ್ಲಾ ಪಡಿಸುವಂತೆ ಕೋರಿದೆ. ಪರಿಸರವಾದಿಗಳ ಅರ್ಜಿ ಲಕ್ಷಾಂತರ ಜನರಿಗೆ ಪ್ರಾಣ ಸಂಕಟ ತಂದೊಡ್ಡಿದೆ. ಮತ್ತೆ ಅದೇ ಸ್ಥಿತಿ. ಸಣ್ಣ ಒತ್ತುವರಿದಾರರನ್ನು ಖುಲ್ಲಾ ಪಡಿಸಿಯಾದರೂ ಅರಣ್ಯವನ್ನು ಸಂರಕ್ಷಿಸುತ್ತೇವೆ ಎನ್ನುವುದು. ರಾಜ್ಯದ ಮುಖ್ಯಮಂತ್ರಿ, ಅರಣ್ಯ ಮಂತ್ರಿ, ಕಾನೂನು ಮಂತ್ರಿ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ನಾಲ್ಕಾರು ಸಭೆ ನಡೆಸಿದ್ದರೆ ಎಂದೋ ಈ ಸಮಸ್ಯೆ ಮುಗಿಯುತ್ತಿತ್ತು. ಹಾಗೆಂದು ವಿಧಾನಸಭೆಯ ಪ್ರತಿ ಅಧಿವೇಶನದಲ್ಲಿ ವಿಷಯ ಚರ್ಚೆಗೆ ಬಂದು ಎಲ್ಲರೂ ಇದನ್ನು ಪರಿಹಾರ ಮಾಡಬೇಕು ಎಂದು ಮೊಸಳೆ ಕಣ್ಣೀರು ಸುರಿಸುವುದನ್ನು ಮಾತ್ರ ಬಿಟ್ಟೇ ಇಲ್ಲ !!