ಬೆಳಗಾವಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಒಂದೇ ಸಾಲಿನ ಠರಾವು ಅಂಗೀಕರಿಸುವ ಬದಲು, ವಿಷಯವನ್ನು ಸರ್ಕಾರದ ಅಭಿಪ್ರಾಯಕ್ಕೆ ಕಳುಹಿಸಿರುವ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ರೂಲಿಂಗ್ ಈಗ ಕಾನೂನು ವಲಯದಲ್ಲೇ ತೀವ್ರ ಪ್ರಶ್ನೆಗೆ ಗುರಿಯಾಗಿದೆ.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ, ಜಲ ತಜ್ಞ ಮೋಹನ ಕಾತರಕಿ ಅವರ ಅಭಿಪ್ರಾಯದ ಪ್ರಕಾರ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಘೋಷಿಸುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ. ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಸೇರಿದಂತೆ ಗಡಿ ಪ್ರದೇಶಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ ಎಂಬ ಕಾರಣ ಮಾತ್ರಕ್ಕೆ, ಪಾಲಿಕೆ ಇಂತಹ ಠರಾವನ್ನು ಸ್ವೀಕರಿಸಬಾರದು ಅಥವಾ ಚರ್ಚೆಗೆ ಅವಕಾಶ ಕೊಡಬಾರದು ಎನ್ನುವುದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೋಹನ ಕಾತರಕಿ ಅವರ ಅಭಿಪ್ರಾಯದ ಕೇಂದ್ರ ಅಂಶ ಸ್ಪಷ್ಟವಾಗಿದೆ. ಬೆಳಗಾವಿ ಕರ್ನಾಟಕದ ಭಾಗವಾಗಿರುವುದು ಭಾವನಾತ್ಮಕ ಘೋಷಣೆಯಲ್ಲ. ಅದು ಸಂಸತ್ತು ಅಂಗೀಕರಿಸಿದ ರಾಜ್ಯ ಪುನರ್ವಿಂಗಡನಾ ಕಾಯ್ದೆ 1956ರಡಿ ಸ್ಥಾಪಿತವಾದ ಕಾನೂನು ಸತ್ಯ. ಈ ಕಾನೂನು ಭಾರತ ಸಂವಿಧಾನದ ಲೇಖ 3 ಮತ್ತು 4ರ ಅಧಿಕಾರದ ಆಧಾರದ ಮೇಲೆ ರೂಪುಗೊಂಡಿದ್ದು, ರಾಜ್ಯಗಳ ಗಡಿ ಮರುರಚನೆಯ ಸಂದರ್ಭದಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿದೆ.
ಹೀಗಾಗಿ, ಪಾಲಿಕೆ ಅಂಗೀಕರಿಸಬೇಕಾಗಿದ್ದ ಠರಾವು ಹೊಸ ಗಡಿ ನಿರ್ಣಯವಲ್ಲ. ಅದು ಸಂಸತ್ತಿನಿಂದ ಈಗಾಗಲೇ ನಿರ್ಧರಿಸಲ್ಪಟ್ಟಿರುವ ಕಾನೂನು ಸ್ಥಿತಿಯ ಪುನರುಚ್ಚಾರ ಮಾತ್ರ. ಈ ಕಾರಣದಿಂದ, “ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ; ಸರ್ಕಾರದ ಅಭಿಪ್ರಾಯ ಕೇಳಲಾಗುವುದು” ಎಂಬ ಮೇಯರ್ ರೂಲಿಂಗ್‌ಗೆ ಕಾನೂನು ಆಧಾರವೇನು ಎಂಬ ಪ್ರಶ್ನೆ ಈಗ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ.
ಕನ್ನಡಪರ ಸಂಘಟನೆಗಳ ನಿಲುವು ಕೂಡ ಇದೇ ದಿಕ್ಕಿನಲ್ಲಿ ತೀವ್ರಗೊಂಡಿದೆ. ಬೆಳಗಾವಿ ಕರ್ನಾಟಕದ್ದು ಎಂದು ಹೇಳುವ ಸರಳ ನಿರ್ಣಯಕ್ಕೂ ಪಾಲಿಕೆ ಹಿಂಜರಿದಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಕಾನೂನು ತಡೆ ಇಲ್ಲದಿದ್ದರೂ, ಆಡಳಿತ ರಾಜಕೀಯ ಮುಜುಗರ ತಪ್ಪಿಸಿಕೊಳ್ಳಲು ವಿಷಯವನ್ನು ಸರ್ಕಾರದ ಹೆಗಲಿಗೆ ಹಾಕಿದೆಯೇ ಎಂಬ ಅನುಮಾನವೂ ಬಲಗೊಂಡಿದೆ.






















