Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಗೇರು ಕ್ಷೇತ್ರದಲ್ಲಿ ಕರ್ನಾಟಕ ಸ್ವಾವಲಂಬಿಯತ್ತ: ಬೆಳೆ ಉತ್ತೇಜನಕ್ಕೆ ₹1 ಕೋಟಿ ಅನುದಾನ ಘೋಷಣೆ

ಗೇರು ಕ್ಷೇತ್ರದಲ್ಲಿ ಕರ್ನಾಟಕ ಸ್ವಾವಲಂಬಿಯತ್ತ: ಬೆಳೆ ಉತ್ತೇಜನಕ್ಕೆ ₹1 ಕೋಟಿ ಅನುದಾನ ಘೋಷಣೆ

0
62

ಪಶ್ಚಿಮಘಟ್ಟ ಸಂರಕ್ಷಣೆ ಅಗತ್ಯ: ಎಂಡೋಸಲ್ಫಾನ್ ಬಳಿಕ ಕುಸಿದ ಗೇರು ಬೆಳೆ ಪುನಶ್ಚೇತನಕ್ಕೆ ಕ್ರಮ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗೇರು ಅಥವಾ ಗೋಡಂಬಿ ಬೆಳೆ ಬೆಳವಣಿಗೆಗೆ ಹೆಚ್ಚಿನ ಅವಕಾಶವಿದ್ದು, ರೈತರಿಗೆ ಗುಣಮಟ್ಟದ ಸಸಿಗಳನ್ನು ಒದಗಿಸಲು ಸರ್ಕಾರದಿಂದ ವಿಶೇಷ ಯೋಜನೆ ಜಾರಿಗೊಳ್ಳಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಗೇರು ಅಭಿವೃದ್ಧಿ ಮಂಡಳಿ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾದ ಗೇರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಗುಣಮಟ್ಟದ ಗೋಡಂಬಿ ಸಸಿಗಳ ಉತ್ಪಾದನೆ ಮತ್ತು ರೈತರಿಗೆ ವಿತರಣೆಗಾಗಿ ₹1 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದರು.

ಎಂಡೋಸಲ್ಫಾನ್ ದುರಂತದ ಬಳಿಕ ಹಲವಾರು ರೈತರು ಗೇರು ಬೆಳೆಯಿಂದ ದೂರ ಸರಿದಿರುವುದನ್ನು ಉಲ್ಲೇಖಿಸಿದ ಅವರು, “ರೈತರಿಗೆ ಮತ್ತೆ ಉತ್ತೇಜನ ನೀಡಿ ಗೇರು ಕ್ಷೇತ್ರದ ಗತವೈಭವ ಮರಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.

ಆಸಕ್ತ ರೈತರಿಗೆ ನಿಗಮದ ನರ್ಸರಿಗಳಲ್ಲಿಯೇ ಕಸಿ ಮಾಡಿದ ಗುಣಮಟ್ಟದ ಗೋಡಂಬಿ ಸಸಿಗಳನ್ನು ಬೆಳೆಸಿ ಪೂರೈಸುವ ಯೋಜನೆ ರೂಪಿಸಲಾಗಿದೆ. ಈ ವರ್ಷದಿಂದಲೇ ಈ ಯೋಜನೆ ಜಾರಿಗೆ ಬರಲಿದ್ದು, ₹1 ಕೋಟಿ ವೆಚ್ಚದಲ್ಲಿ ಸಸಿಗಳನ್ನು ಬೆಳೆಸಿ ಮುಂದಿನ ವರ್ಷದಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಮೇಳದಲ್ಲಿ ವಿವಿಧ ಗೇರು ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳನ್ನು ವೀಕ್ಷಿಸಿದ ಖಂಡ್ರೆ, “ಗೇರು ಮೌಲ್ಯವರ್ಧನೆಗೆ ಒತ್ತು ನೀಡಿದರೆ ರೈತರಿಗೆ ಹೆಚ್ಚಿನ ಆದಾಯ ದೊರೆಯಲಿದೆ. ಉತ್ಪಾದನಾ ವೆಚ್ಚ ಕಡಿಮೆಯಾಗಿ ಲಾಭ ಹೆಚ್ಚುತ್ತದೆ” ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಭಾರತವು ಕಚ್ಚಾ ಗೇರು ಬೀಜವನ್ನು ಆಮದು ಮಾಡಿಕೊಂಡು ಸಂಸ್ಕರಿಸುವ ಪರಿಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು. ಹೀಗಾಗಿ ರೈತರಿಗೆ ಆಧುನಿಕ ಮಾಹಿತಿ, ತರಬೇತಿ ಹಾಗೂ ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವ ಮೂಲಕ ಕರ್ನಾಟಕವನ್ನು ಗೇರು ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಪಶ್ಚಿಮಘಟ್ಟದ ಮಹತ್ವವನ್ನು ಉಲ್ಲೇಖಿಸಿದ ಸಚಿವರು, “ದಕ್ಷಿಣ ಕನ್ನಡದ ಜನರು ಪಶ್ಚಿಮಘಟ್ಟ ಪ್ರದೇಶದಲ್ಲಿ ಹುಟ್ಟಿ ಬೆಳೆದಿರುವುದು ಪುಣ್ಯ. ಈ ಪರ್ವತ ಶ್ರೇಣಿಗಳು ಮಳೆಯ ಮಾದರಿಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಪಶ್ಚಿಮಘಟ್ಟ ಸಂರಕ್ಷಣೆ ಎಲ್ಲರ ಜವಾಬ್ದಾರಿ” ಎಂದು ಹೇಳಿದರು.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದ ಮಳೆಯ ಮಾದರಿಯಲ್ಲಿ ತೀವ್ರ ಬದಲಾವಣೆ ಉಂಟಾಗುತ್ತಿದೆ ಎಂದು ಎಚ್ಚರಿಸಿದ ಅವರು, “ಒಂದು ತಿಂಗಳ ಮಳೆ ಒಂದು ವಾರದಲ್ಲಿ, ಒಂದು ವಾರದ ಮಳೆ ಒಂದೇ ದಿನದಲ್ಲಿ ಬೀಳುತ್ತಿದೆ. ಇದರಿಂದ ಕೃಷಿ ಬೆಳೆಗಳಿಗೆ ಭಾರೀ ಹಾನಿ ಉಂಟಾಗುತ್ತಿದೆ. ಆದ್ದರಿಂದ ಹಸಿರು ಹೊದಿಕೆ ಹೆಚ್ಚಿಸುವುದು ಮತ್ತು ವೃಕ್ಷ ಸಂರಕ್ಷಣೆ ಅತ್ಯಗತ್ಯ” ಎಂದರು.

ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗಾಗಿ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಚಿವರು ಮಕ್ಕಳೊಂದಿಗೆ ಕೆಲ ಸಮಯ ಕಳೆದರು ಹಾಗೂ 12 ಪ್ರಗತಿಪರ ರೈತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಜೇಗೌಡ, ಶಾಸಕ ಅಶೋಕ್ ಕುಮಾರ್ ರೈ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.