ರಾಮನಗರ : ಮಾನವ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯದ ಅಪರೂಪದ ಉದಾಹರಣೆಯೊಂದು ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ. 80 ವರ್ಷದ ವೃದ್ಧೆ ಪಾರ್ವತಮ್ಮ ಅವರ ಸಾವಿಗೆ ಕೋತಿಯೊಂದು ಮರುಗಿ, ಮೃತದೇಹದ ಮೇಲೆ ಮಲಗಿ ಕಣ್ಣೀರು ಹಾಕಿದ ದೃಶ್ಯ ಎಲ್ಲರ ಮನಸ್ಸನ್ನು ಮಿಡಿಯುವಂತೆ ಮಾಡಿದೆ.
ಮನುಷ್ಯ-ಪ್ರಾಣಿ ಬಾಂಧವ್ಯಕ್ಕೆ ಸಾಕ್ಷಿ : ಪಾರ್ವತಮ್ಮ ಅವರು ತಮ್ಮ ಮನೆ ಬಳಿ ಬರುತ್ತಿದ್ದ ಕೋತಿಗೆ ಪ್ರತಿದಿನ ಆಹಾರ ನೀಡಿ ಸಾಕಷ್ಟು ಪ್ರೀತಿ ತೋರಿಸುತ್ತಿದ್ದರು. ಈ ಕಾರಣದಿಂದ ಕೋತಿಯೊಂದಿಗೆ ಅವರಿಗೆ ವಿಶೇಷ ಒಡನಾಟ ಬೆಳೆದಿತ್ತು. ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಪಾರ್ವತಮ್ಮ ಅವರು ನಿಧನರಾಗಿದ್ದಾರೆ. ಅವರ ಮೃತದೇಹವನ್ನು ಮನೆಗೆ ತಂದು ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಮೃತದೇಹದ ಬಳಿ ಮಂಗದ ಮೌನ ರೋದನೆ : ಈ ವೇಳೆ, ಕೋತಿಯೊಂದು ಏಕಾಏಕಿ ಮನೆಗೆ ಬಂದು ನೇರವಾಗಿ ಪಾರ್ವತಮ್ಮ ಅವರ ಮೃತದೇಹದತ್ತ ಧಾವಿಸಿದೆ. ಕೆಲವು ಕ್ಷಣಗಳ ಕಾಲ ಅವರ ಮುಖ ಮತ್ತು ತಲೆಗೆ ಒರಗಿ ಮರುಗಿ, ನಂತರ ಮೃತದೇಹದ ಮೇಲೆಯೇ ಮಲಗಿ ಕಣ್ಣೀರು ಹಾಕಿದಂತೆ ಕಾಣಿಸಿಕೊಂಡಿದೆ. ಇದನ್ನು ಕಂಡ ಗ್ರಾಮಸ್ಥರು ಭಾವುಕರಾಗಿ, ಮಂಗದ ವರ್ತನೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಂತ್ಯಕ್ರಿಯೆಯವರೆಗೂ ಅಲ್ಲೇ ಕಾದ ಮಂಗ : ಶವವನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವವರೆಗೂ ಮಂಗ ಸ್ಥಳದಲ್ಲೇ ಮೌನವಾಗಿ ಕುಳಿತಿತ್ತು. ಬಳಿಕ ಸ್ಥಳೀಯರು ಅದನ್ನು ಹಿಡಿದು ಬೇರೆಡೆಗೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ.
ವಿಡಿಯೋ ವೈರಲ್: ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾನವೀಯತೆ ಮತ್ತು ಪ್ರಾಣಿ ಪ್ರೀತಿಯ ಬಗ್ಗೆ ಜನರಲ್ಲಿ ಚರ್ಚೆಗೆ ಕಾರಣವಾಗಿದೆ.






















