Home Advertisement
Home ನಮ್ಮ ಜಿಲ್ಲೆ ಹಾವೇರಿ ಕಾರಿಡಾರ್‌ಗೆ ನುಗ್ಗಿದ ಬಸ್ – 2 ವರ್ಷದ ಮಗು ಸಾವು, ನಾಲ್ವರಿಗೆ ಗಾಯ

ಕಾರಿಡಾರ್‌ಗೆ ನುಗ್ಗಿದ ಬಸ್ – 2 ವರ್ಷದ ಮಗು ಸಾವು, ನಾಲ್ವರಿಗೆ ಗಾಯ

0
262

ಬಸ್ ನಿಲ್ದಾಣದಲ್ಲಿ ದುರಂತ: ಕಾರಿಡಾರ್‌ಗೆ ನುಗ್ಗಿದ ಬಸ್‌ಗೆ ಮಗು ಬಲಿ

ಹಾವೇರಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಭೀಕರ ಅವಘಡ ಸಂಭವಿಸಿ, ಕಾರಿಡಾರ್‌ಗೆ ನುಗ್ಗಿದ ಬಸ್ ಡಿಕ್ಕಿಯಿಂದ ಎರಡು ವರ್ಷದ ಮಗು ಗಂಭೀರ ಗಾಯಗೊಂಡು ಮೃತಪಟ್ಟ ದುರ್ಘಟನೆ ನಡೆದಿದೆ. ಮೃತ ಮಗುವನ್ನು ಹಜರತ್ ಅಲಿ (2) ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸ್ ಕಾರಿಡಾರ್‌ಗೆ ನುಗ್ಗಿದ ರಭಸ: ಲಕ್ಷ್ಮೇಶ್ವರದತ್ತ ತೆರಳುತ್ತಿದ್ದ ಬಸ್ ಅತಿವೇಗದಲ್ಲಿ ಬಸ್ ನಿಲ್ದಾಣಕ್ಕೆ ನುಗ್ಗಿ, ಪ್ರಯಾಣಿಕರ ಕಾಯುವಿಕೆಗೆ ನಿರ್ಮಿಸಲಾದ ಕಾರಿಡಾರ್‌ಗೆ ಡಿಕ್ಕಿ ಹೊಡೆದು, ಮುಂದೆ ಇದ್ದ ಬೇಕರಿ ಕಟ್ಟಡಕ್ಕೆ ಅಪ್ಪಳಿಸಿ ನಿಂತಿದೆ. ಡಿಕ್ಕಿಯ ತೀವ್ರತೆಗೆ ಕಾರಿಡಾರ್‌ನಲ್ಲಿ ನಿಂತಿದ್ದವರು ನೆಲಕ್ಕುರುಳಿದ್ದು, ಸ್ಥಳದಲ್ಲಿ ಅಸ್ತವ್ಯಸ್ತತೆ ಉಂಟಾಯಿತು.

ಮಗು ಚಿಕಿತ್ಸೆ ವೇಳೆ ಸಾವು : ಈ ಅಪಘಾತದಲ್ಲಿ ಸವಣೂರು ಪಟ್ಟಣದ ನಿವಾಸಿ ಹಜರತ್ ಅಲಿ ಎಂಬ ಎರಡು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.

ಗಾಯಾಳುಗಳಿಗೆ ಚಿಕಿತ್ಸೆ : ಅಪಘಾತದಲ್ಲಿ ಗಾಯಗೊಂಡಿರುವ ವಾಸುದೇವ್ (44), ಹರ್ಷಾ (6), ಕಾವ್ಯಾಂಜಲಿ (39) ಅವರಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳು ಬಂಕಾಪುರ ಪಟ್ಟಣದವರು ಎಂದು ತಿಳಿದುಬಂದಿದೆ.

ಚಾಲಕನ ನಿರ್ಲಕ್ಷ್ಯಕ್ಕೆ ಆಕ್ರೋಶ : ಘಟನೆಯ ಬಳಿಕ ಸ್ಥಳಕ್ಕೆ ನೂರಾರು ಜನರು ಜಮಾಯಿಸಿದ್ದು, ಬಸ್ ಚಾಲಕ ಹಾಗೂ ಕಂಡಕ್ಟರ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿವೇಗ ಮತ್ತು ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.

ಪೊಲೀಸ್ ಕ್ರಮ : ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.