ಚಂಡೀಗಢ: ಕೂಪರ್ ಕೊನೊಲಿ (ಅಜೇಯ 72) ಉತ್ತಮ ಬ್ಯಾಟಿಂಗ್ ನೆರವಿನಿಂದಾಗಿ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿತು.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕೇವಲ 19.1 ಓವರ್‌ಗಳಲ್ಲಿ 165ರನ್ ಗಳಿಸಿ ಗೆಲುವಿನ ಗುರಿ ಮುಟ್ಟಿತು.
ಪಂಜಾಬ್ ಇನ್ನಿಂಗ್ಸ್‌ನ ಎರಡನೇ ಓವರ್‌ನ ಎರಡನೇ ಎಸೆತದಲ್ಲಿಯೇ ಪ್ರಿಯಾಂಶ್ ಆರ್ಯ (7) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಎರಡನೇ ವಿಕೆಟ್‌ಗೆ ಪ್ರಭಸಿಮ್ರನ್ ಸಿಂಗ್ ಮತ್ತು ಕೂಪರ್ ಕೊನೊಲಿ 76 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯುತ್ತಿರುವಾಗ ರಶೀದ್ ಖಾನ್ ಎಸೆತದಲ್ಲಿ ಪ್ರಭಸಿಮ್ರನ್ ಸಿಂಗ್ ಔಟಾದರು.
ಬಳಿಕ ಶ್ರೇಯಸ್ ಅಯ್ಯರ್ ಕೇವಲ 18 ರನ್ ಗಳಿಸಿ ಪೆವಿಲಿಯನ್ ಸೇರುತ್ತಿದ್ದಂತೆ ಇವರ ಹಿಂದೆಯೇ ನಾಲ್ವರು ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು.
ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್ ಆರಂಭದಲ್ಲಿಯೇ ಸಾಯಿ ಸುದರ್ಶನ (13) ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ಶುಭಮನ್ ಗಿಲ್ (39) ಮತ್ತು ಜೋಸ್ ಬಟ್ಲರ್ (38) ಇಬ್ಬರ ಜೋಡಿ 46 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಥಿತಿಯತ್ತ ತಂದಿತು.
9.2 ಓವರ್‌ಗಳಲ್ಲಿ 83 ರನ್‌ಗಳಿಸಿದ್ದ ಗುಜರಾತ್‌ಗೆ ಯುಜುವೇಂದ್ರ ಚಾಹಲ್ ಶಾಕ್ ನೀಡಿದರು. ನಾಯಕ ಗಿಲ್ ಅವರನ್ನು ಪೆವಿಲಿಯನ್ ಸೇರಿಸುವಲ್ಲಿ ಯಶಸ್ವಿಯಾದರು. ಇವರ ಹಿಂದೆಯೇ 36 ರನ್ ಜತೆಯಾಟ ನಡೆಸಿದ ಗ್ಲೆನ್ ಫಿಲಿಪ್ಸ್ 25 ರನ್ ಗಳಿಸಿ ವೈಶಾಕ್ ವಿಜಯಕುಮಾರಗೆ ವಿಕೆಟ್ ಒಪ್ಪಿಸಿದರು.
ಜೋಸ್ ಬಟ್ಲರ್ ಕೂಡಾವರ ಹಿಂದೆಯೇ ತಮ್ಮ ಆಟವನ್ನು ಮುಗಿಸಿದರು. ವಾಷಿಂಗ್ಟನ್ ಸುಂದರ್ ಕೇವಲ 18 ರನ್ ಕಾಣಿಕೆ ನೀಡಿ ಪೆವಿಲಿಯನ್ ಕಡೆಗೆ ಸಾಗಿದರು.
ಪಂಜಾಬ್ ಕಿಂಗ್ಸ್ ಪರ ವೈಶಾಕ್ ವಿಜಯಕುಮಾರ್ 34ಕ್ಕೆ 3 ವಿಕೆಟ್ ಪಡೆದರೆ, ಯುಜುವೇಂದ್ರ ಚಾಹಲ್ 28ಕ್ಕೆ 2, ಮಾರ್ಕೊ ಜಾನ್ಸೆನ್ 20ಕ್ಕೆ 1 ವಿಕೆಟ್ ಪಡೆದರು.























