Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಸಿದ್ದರಾಮಯ್ಯ ಅಲ್ಲ ‘ಸಾಲದ ರಾಮಯ್ಯ’: ಆರ್. ಅಶೋಕ್ ವ್ಯಂಗ್ಯ

ಸಿದ್ದರಾಮಯ್ಯ ಅಲ್ಲ ‘ಸಾಲದ ರಾಮಯ್ಯ’: ಆರ್. ಅಶೋಕ್ ವ್ಯಂಗ್ಯ

0
24

ದಾವಣಗೆರೆ: ರಾಜ್ಯದ ಸಿದ್ದರಾಮ್ಯಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಈ ಮೂರು ವರ್ಷಗಳ ಅವಧಿಯಲ್ಲಿ ಸಾಲದ ಹೊರೆ ಏರಿಸುವ ಮೂಲಕ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿದ್ದು, ಪ್ರತಿಯೊಬ್ಬ ನಾಗರೀಕರ ಮೇಲೆ 1.12 ಲಕ್ಷ ರೂ., ಸಾಲ ಹೋರಿಸಲಾಗಿದೆ. ಒಟ್ಟಾರೆ ಸಿದ್ದರಾಮಯ್ಯ ಈಗ ಸಾಲದರಾಮಯ್ಯ ಆಗಿದ್ದಾರೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಭಿವೃದ್ಧಿ ಕೆಲಸಗಳನ್ನು ಮರೆತು ಕೇವಲ ಸಾಲ ಮಾಡುವುದರಲ್ಲಿ ಮುಳುಗಿದ್ದು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಆರ್ಥಿಕ ಶಿಸ್ತು ಹದಗೆಟ್ಟಿದೆ. ಸಾಲದ ಹೊರೆ ಮಿತಿ ಮೀರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದಾಗ 2023ರಲ್ಲಿ 81ಸಾವಿರ ಕೋಟಿ, 2024ರಲ್ಲಿ 91ಸಾವಿರ ಕೋಟಿ, 2025ರಲ್ಲಿ 1.16 ಲಕ್ಷ ಕೋಟಿ, ಪ್ರಸ್ತುತ 1.35 ಲಕ್ಷ ಕೋಟಿ ಸಾಲ ಮಾಡಿದೆ. ರಾಜ್ಯವು ವಾರ್ಷಿಕವಾಗಿ ಸುಮಾರು 45,600 ಕೋಟಿ ರೂ.,ಗಳನ್ನು ಕೇವಲ ಬಡ್ಡಿ ರೂಪದಲ್ಲಿ ಪಾವತಿಸುತ್ತಿದೆ. ಅಂದರೆ ದಿನಕ್ಕೆ ಅಂದಾಜು 125 ಕೋಟಿ ರೂ., ಪ್ರತಿ ಗಂಟೆಗೆ ಸುಮಾರು 5.2 ಕೋಟಿ ರೂ., ಬಡ್ಡಿ ಪಾವತಿಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಹಣವಿಲ್ಲದೆ ಒಂದು ತಿಂಗಳ ಹಣವನ್ನೇ ಬಾಕಿ ಉಳಿಸಿಕೊಂಡಿದ್ದಾರೆ. ಸುಮಾರು 726 ಕೋಟಿ ರೂ.,ಗಳನ್ನು ಸರ್ಕಾರ ಪಾವತಿಸಬೇಕಿದೆ. ಸಿದ್ದರಾಮಯ್ಯ ಅವರು 17 ಬಾರಿ ಬಜೆಟ್ ಮಂಡಿಸಿ ಚಾಂಪಿಯನ್ ಎನಿಸಿಕೊಂಡಿರಬಹುದು, ಆದರೆ ಇಂದು ರಾಜ್ಯದ ಪರಿಸ್ಥಿತಿ ಶೋಚನೀಯವಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಯಾವುದೇ ಹೊಸ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ನಿರ್ಮಿಸಿದಂತೆ ಒಂದೇ ಒಂದು ಹೊಸ ಬಸ್ ನಿಲ್ದಾಣ ಅಥವಾ ಶಾಲೆಗಳನ್ನು ಇವರು ಕಟ್ಟಿಲ್ಲ ಬದಲಿಗೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 3,617 ಕನ್ನಡ ಶಾಲೆಗಳು ಮುಚ್ಚಲ್ಪಟ್ಟಿವೆ ಮತ್ತು 14,000 ಕ್ಕೂ ಹೆಚ್ಚು ಶಿಕ್ಷಕರ ಕೊರತೆಯಲ್ಲಿ ಕನ್ನಡ ಶಾಲೆಗಳು ನಡೆಯುತ್ತಿವೆ ಎಂದು ಅಂಕಿ-ಅಂಶಗಳ ಸಮೇತ ಕಿಡಿಕಾರಿದರು.