Home Advertisement
Home ವಿಶೇಷ ಸುದ್ದಿ ಅಹಿಂಸೆಯ ಸಾಕಾರಮೂರ್ತಿ ಭಗವಾನ್ ಮಹಾವೀರ

ಅಹಿಂಸೆಯ ಸಾಕಾರಮೂರ್ತಿ ಭಗವಾನ್ ಮಹಾವೀರ

0
98

ಹಿಂಸೆಯಿಂದ ಎಲ್ಲವನ್ನೂ ಸಾಧಿಸುತ್ತೇವೆ ಎನ್ನುವುದು ಕೇವಲ ಭ್ರಮೆ. ಹಿಂಸೆಯಿಂದ ದುಃಖ, ಯಾತನೆ, ದ್ವೇಷ ಹೆಚ್ಚುತ್ತವೆ. ಅಹಿಂಸಾಮಾರ್ಗದ ಮೂಲಕ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಈ ಮಾರ್ಗವನ್ನು ಬೋಧಿಸಿದ ಭಗವಾನ್ ಮಹಾವೀರರ ಉಪದೇಶಗಳು ಸಾರ್ವಕಾಲಿಕವಾದವು.

ಇಂದಿಗೆ 2625 ವರ್ಷಗಳ ಹಿಂದೆ ಈ ನಾಡಿನಲ್ಲಿ ಅನ್ಯಾಯ ತಾಂಡವವಾಡುತ್ತಿತ್ತು, ಮಾನವೀಯತೆ ಮರೆಯಾಗಿತ್ತು. ಮಾನವಸಮಾಜ ವಿವೇಕಹೀನವಾಗಿ ನಡೆದುಕೊಳ್ಳುತ್ತಿತ್ತು. ಇಂಥ ಸಂದರ್ಭದಲ್ಲಿ ಇಂದ್ರಿಯಸುಖಗಳನ್ನು ಮೀರಿ ಮೋಕ್ಷಮಾರ್ಗವನ್ನು ತೋರಿಸುವ ಒಬ್ಬ ಮಹಾಪುರುಷನ ಉದಯ ಅಗತ್ಯವಾಗಿತ್ತು. ಈ ನಾಡಿನ ಭಾಗ್ಯವೆಂಬಂತೆ ವೈಶಾಲ ಕುಂಡಲಪುರ ರಾಜ್ಯದ ಸಿದ್ಧಾರ್ಥ ಮತ್ತು ತ್ರಿಶಲಾದೇವಿ ರಾಜದಂಪತಿಯ ಮಗನಾಗಿ ಚೈತ್ರ ಶುಕ್ಲ ತ್ರಯೋದಶಿಯಂದು ಮಹಾವೀರರು ಜನಿಸಿದರು.

ಅವರ ಉದಯದಿಂದ ನಾಡಿನಲ್ಲಿ ದಿನದಿಂದ ದಿನಕ್ಕೆ ಸಕಲ ಐಶ್ವರ್ಯ ವೃದ್ಧಿಯಾಗುವುದನ್ನು ಕಂಡು ಮಗುವಿಗೆ `ವರ್ಧಮಾನ’ ಎಂದು ನಾಮಕರಣ ಮಾಡಿದರು. ಅವರ ಬಾಲಲೀಲೆಗಳು, ಧೈರ್ಯ ಸಾಹಸಗಳು ರೋಚಕವಾಗಿದ್ದವು. ಅವರಲ್ಲಿ ತೇಜಸ್ಸು, ವೀರ ಮುಖಚರ್ಯೆ, ಉದಾತ್ತ ಗುಣಗಳು, ಸಮಾನತೆಯ ಭಾವಗಳು, ಮಾನವೀಯ ಗುಣಗಳು ಎದ್ದು ಕಾಣುತ್ತಿದ್ದವು. ದಯಾಭಾವದ ಯುವರಾಜ ವರ್ಧಮಾನರು ಅರಮನೆಯ ಸಕಲ ಭೋಗಭಾಗ್ಯಗಳ ನಡುವೆ ಇದ್ದರೂ, ಅವರಿಗೆ ಅವೆಲ್ಲವೂ ನಶ್ವರವಾಗಿ ಕಂಡವು. ಅವರ ಮನಸ್ಸು ಸದಾ ಲೋಕಕಲ್ಯಾಣದ ಬಗ್ಗೆಯೇ ಚಿಂತಿಸುತ್ತಿತ್ತು. ಜತೆಗೆ ಆತ್ಮಕಲ್ಯಾಣದ ಕಡೆಗೂ ಹರಿಯತೊಡಗಿತು.

ಮೋಕ್ಷಮಾರ್ಗವನ್ನು ಹುಡುಕುವ ಇಚ್ಛೆಯಿಂದ ವರ್ಧಮಾನರು ಸರ್ವಸಂಗ ಪರಿತ್ಯಾಗದ ನಿರ್ಧಾರ ಮಾಡಿದರು. ಮಾರ್ಗಶಿರ ಕೃಷ್ಣ ಪಕ್ಷ ದಶಮಿಯಂದು ತಮ್ಮ 29ನೇ ವಯಸ್ಸಿನಲ್ಲಿ ಯುವರಾಜ ಪದವಿಯನ್ನು ತ್ಯಜಿಸಿ ಮುನಿದೀಕ್ಷೆಯನ್ನು ಧರಿಸಿ ಯೋಗಸಾಧನೆಗೆ ಮುಂದಾದರು. ದೀಕ್ಷಾಧಾರಣದ ನಂತರ ಹನ್ನೆರಡು ವರ್ಷಗಳ ಉಗ್ರ ತಪಸ್ಸಿನ ಫಲವಾಗಿ ಕೈವಲ್ಯಜ್ಞಾನ ಪ್ರಾಪ್ತವಾಯಿತು. ಆಗ ವರ್ಧಮಾನರು ರಾಗದ್ವೇಷಗಳಿಂದ ಸಂಪೂರ್ಣ ಮುಕ್ತರಾಗಿ ನಿಜವಾದ ಮಹಾವೀರರಾದರು, ಎಲ್ಲವನ್ನೂ ಗೆದ್ದು `ಜಿನ’ನಾದರು.

ಈ ಲೋಕಕ್ಕೆ ನಿಜವಾಗಿಯೂ ಏನು ಬೇಕಾಗಿದೆ ಎಂಬುದನ್ನು ತೋರಿಸಲು ಮುಂದಾದ ಅವರು ಲೋಕಸಂಚಾರ ಮಾಡಿ ಜನರಿಗೆ ಧರ್ಮೋದೇಶ ನೀಡಿದರು. ಪ್ರಪಂಚದ ಜೀವರಾಶಿಗಳೆಲ್ಲ ಅವರ `ಸಮೋಸರಣ’ ಮಂಟಪಕ್ಕೆ (ಧರ್ಮಸಭೆ) ಆಗಮಿಸುತ್ತಿದ್ದವು. ಇಲ್ಲಿ ಎಲ್ಲ ಜೀವಿಗಳು ಧರ್ಮೋಪದೇಶ ಕೇಳುತ್ತಿದ್ದವು ಎಂದು ಹೇಳಲಾಗುತ್ತದೆ. ಸ್ವಾಭಾವಿಕ ವೈರತ್ವ ಹೊಂದಿದ್ದ ಹಾವು-ಮುಂಗುಸಿ, ಹುಲಿ-ಹಸು ಇತ್ಯಾದಿಗಳೂ ಅವರ ಧರ್ಮಸಭೆಯಲ್ಲಿ ಸೌಹಾರ್ದದಿಂದ ವರ್ತಿಸುತ್ತಿದ್ದವು.

ಇಂಥ ಧರ್ಮಸಭೆಯಲ್ಲಿ ಮಹಾವೀರರು, `ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕು ಇರುವದರಿಂದ ನೀನು ಬದುಕು ಇತರ ಜೀವಿಗಳನ್ನೂ ಬದುಕಲು ಬಿಡು. ಪ್ರತಿ ಜೀವಿಯೂ ತನ್ನ ತಪ್ಪಿನಿಂದಲೇ ದುಃಖಿಯಾಗುತ್ತಾನೆ. ಆದ್ದರಿಂದ ಆ ತಪ್ಪನ್ನು ತಿದ್ದಿಕೊಂಡು ಸುಖಿಯಾಗಿರು’ ಎಂಬುದಾಗಿ ಧರ್ಮೋಪದೇಶ ನೀಡಿದರು. ಸಕಲರೂ ಸಮಾನರು, ಭೇದಭಾವ ಬೇಡ ಎಂದೂ, ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ ಈ ಪಂಚತತ್ತ್ವಗಳನ್ನು ಪಾಲಿಸಿದರೆ ಶಾಂತಿಯಿಂದ ಬಾಳಬಹುದೆಂದು ಉಪದೇಶಿಸಿದರು. ಸಮ್ಯಕ್ ದರ್ಶನ (ಸರಿಯಾದ ನಂಬಿಕೆ), ಸಮ್ಯಕ್ ಜ್ಞಾನ (ಸರಿಯಾದ ಜ್ಞಾನ), ಮತ್ತು ಸಮ್ಯಕ್ ಚರಿತ್ರ (ಸರಿಯಾದ ನಡವಳಿಕೆ) ಎಂಬ ರತ್ನತ್ರಯಗಳನ್ನು ಅನುಸರಿಸುವುದೇ ಮೋಕ್ಷಮಾರ್ಗವೆಂದೂ ಹೇಳಿದರು. ಅವರ ಉಪದೇಶ ಎಲ್ಲ ಜೀವಿಗಳಿಗೂ ಅವರವರದೇ ಭಾಷೆಯಲ್ಲಿ ಕೇಳಿಸುತ್ತಿತ್ತು ಎನ್ನಲಾಗುತ್ತದೆ.

ಹೀಗೆ ಮಹಾವೀರರು 32 ವರ್ಷ ನಿರಂತರವಾಗಿ ಲೋಕಸಂಚಾರ ಮಾಡುತ್ತ, ಧರ್ಮದ ಹಾದಿಯಲ್ಲಿ ನಡೆಯುವಂತೆ ಜನರಿಗೆ ಮಾರ್ಗದರ್ಶನ ಮಾಡಿದರು. ಮುಂದೆ ಇಂದಿನ ಬಿಹಾರ ಪ್ರಾಂತದ ಪಾವಾಪುರಿಯಲ್ಲಿ ಕಾರ್ತಿಕ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆಯ ಬೆಳಗಿನ ಜಾವ ತಮ್ಮ 71ನೇ ವಯಸ್ಸಿನಲ್ಲಿ ನಿರ್ವಾಣ ಹೊಂದಿದರು.

ಈಗ ಜಗತ್ತಿನಲ್ಲಿ ಅಶಾಂತಿ, ಯುದ್ಧ, ಹಿಂಸೆಗಳು ತಾಂಡವವಾಡುತ್ತಿವೆ. ಈ ಸಂಧರ್ಭದಲ್ಲಿ ಭಗವಾನ್ ಮಹಾವೀರರ ಸ್ಮರಣೆ, ಆದರ್ಶಗಳು, ಉಪದೇಶಗಳು ತುಂಬ ಅಗತ್ಯವಾಗಿವೆ. ಇವುಗಳನ್ನು ಅನುಸರಿಸುವ ಮೂಲಕ ಜಯಂತಿಯನ್ನು ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಅವರ ಸ್ಮರಣೆ ನಮ್ಮ ಬದುಕನ್ನು ಹಸನಗೊಳಿಸಲಿ.

– ಶಾಂತರಾಜ ಮಲ್ಲಸಮುದ್ರ, ಧಾರವಾಡ