ವಾರಾಣಸಿ: ಬೆಂಗಳೂರಿನಿಂದ ವಾರಾಣಸಿ ಕಡೆಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ವ್ಯಕ್ತಿಯೊಬ್ಬ ನನಗೆ ದೆವ್ವ ಹಿಡಿದಿದೆ ಎಂದು ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನಿಸಿದ ಅಚ್ಚರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮವು ಜಿಲ್ಲೆಯ ನಿವಾಸಿ ಮೊಹಮ್ಮದ್ ಅದ್ನಾನ್ ವಿಮಾನ ಟೇಕ್ ಆಫ್ ಆದ ಕೆಲವು ನಿಮಿಷಗಳಲ್ಲಿ ಬಾಗಿಲು ತೆರೆಲು ಯತ್ನಿಸಿದ್ದು, ಇದನ್ನು ಗಮನಿಸಿದ ಕ್ಯಾಬಿನ್ ಸಿಬ್ಬಂದಿ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದಾರೆ.
ನಂತರ ವಿಮಾನ ವಾರಣಾಸಿಯಲ್ಲಿ ಲ್ಯಾಂಡಿಂಗ್ ಆಗುವ 15 ನಿಮಿಷದ ಮೊದಲು ಮತ್ತೆ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಬಳಿಕ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದು ವಿಚಾರಣೆ ವೇಳೆ ನಾನು ಯಾಕೆ ಈ ರೀತಿ ವರ್ತಿಸಿದೆ ಎಂದು ಗೊತ್ತಿಲ್ಲ, ನನಗೆ ದೆವ್ವ ಹಿಡಿದಿತ್ತು ಎಂದು ಉತ್ತರಿಸಿದ್ದಾನೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ನನಗೆ ತುರ್ತು ನಿರ್ಗಮನ ಬಾಗಿಲಿನ ಹ್ಯಾಂಡಲ್ ಬಗ್ಗೆ ಅರಿವಿರಲಿಲ್ಲ ಎಂದಿದ್ದಾನೆ.





















