Home Advertisement
Home ನಮ್ಮ ಜಿಲ್ಲೆ ರಾಯಚೂರು ಆರ್‌ಎಂಪಿ ವೈದ್ಯನ ಇಂಜೆಕ್ಷನ್‌ಗೆ 15 ವರ್ಷದ ಬಾಲಕಿ ಬಲಿ

ಆರ್‌ಎಂಪಿ ವೈದ್ಯನ ಇಂಜೆಕ್ಷನ್‌ಗೆ 15 ವರ್ಷದ ಬಾಲಕಿ ಬಲಿ

0
224

ರಾಯಚೂರು(ಕವಿತಾಳ): ಸಮೀಪದ ಅಮೀನಗಡ ಗ್ರಾಮದಲ್ಲಿ ಖಾಸಗಿ ವೈದ್ಯನೊಬ್ಬನ ನಿರ್ಲಕ್ಷ್ಯ ಹಾಗೂ ಆತ ನೀಡಿದ ತಪ್ಪು ಇಂಜೆಕ್ಷನ್‌ನಿಂದಾಗಿ 15 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಬಾಲಕಿಯನ್ನು ಅಮೀನಗಡದ ನಿವಾಸಿ ಹುಲಿಗೆಪ್ಪ ಅವರ ಪುತ್ರಿ ಸಿಂಧೂ (15) ಎಂದು ಗುರುತಿಸಲಾಗಿದೆ. ಈಕೆಯು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ಉಪಜೀವನಕ್ಕಾಗಿ ಪೋಷಕರು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳಿದ್ದರಿಂದ, ಸಿಂಧೂ ತನ್ನ ಅಜ್ಜಿ ಯಲ್ಲಮ್ಮ ಅವರ ಬಳಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು.

ಘಟನೆಯ ವಿವರ: ಮಾ. 27ರ ಮಧ್ಯರಾತ್ರಿ 1.30ರ ಸುಮಾರಿಗೆ ಸಿಂಧೂಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಾಗ, ಆಕೆಯ ಅಜ್ಜಿ ಗ್ರಾಮದ ಖಾಸಗಿ ವೈದ್ಯ ಉತ್ತಮಕುಮಾರ್ ಬಳಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ವೈದ್ಯ ಉತ್ತಮಕುಮಾರ್ ಅವರು ಬಾಲಕಿಯ ಆರೋಗ್ಯದ ಸಮಸ್ಯೆಯನ್ನು ಸರಿಯಾಗಿ ಪರೀಕ್ಷಿಸದೆ, ನಿರ್ಲಕ್ಷ್ಯದಿಂದ ಯಾವುದೋ ಇಂಜೆಕ್ಷನ್ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇಂಜೆಕ್ಷನ್ ನೀಡಿದ ಕೆಲವೇ ಹೊತ್ತಿನಲ್ಲಿ ಅದರ ಅಡ್ಡಪರಿಣಾಮಗಳು ಕಾಣಿಸಿಕೊಂಡಿದ್ದು, ಇಂಜೆಕ್ಷನ್ ಮಾಡಿದ ಜಾಗದಲ್ಲಿ ಊತ ಹಾಗೂ ಸಣ್ಣ ಸಣ್ಣ ಗುಳ್ಳೆಗಳು ಎದ್ದು ಬಾಲಕಿ ನರಳಾಡಿದ್ದಾಳೆ. ಮಗಳ ಅಸ್ವಸ್ಥತೆಯ ವಿಷಯ ತಿಳಿದು ಬೆಂಗಳೂರಿನಿಂದ ಬಂದ ಪೋಷಕರು, ಹೆಚ್ಚಿನ ಚಿಕಿತ್ಸೆಗಾಗಿ ಸಿಂಧೂಳನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತರುವಷ್ಟರಲ್ಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ತದನಂತರ ಶವವನ್ನು ಕವಿತಾಳ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ: ಚೆನ್ನಾಗಿದ್ದ ಮಗಳು ದಿಢೀರ್ ಸಾವನ್ನಪ್ಪಿದ್ದನ್ನು ಕಂಡು ಆಘಾತಕ್ಕೊಳಗಾದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗಳ ಮೃತದೇಹ ಕಂಡು ಪೋಷಕರು ಕಣ್ಣೀರು ಹಾಕಿದ ದೃಶ್ಯ ನೆರೆದವರ ಕರಳು ಹಿಂಡುವಂತಿತ್ತು.

ವಿವಿಧ ಸಂಘಟನೆಗಳ ಆಕ್ರೋಶ: ಖಾಸಗಿ ವೈದ್ಯನ ನಿರ್ಲಕ್ಷ್ಯವೇ ಮುಗ್ಧ ಬಾಲಕಿಯ ಪ್ರಾಣ ಕಸಿದಿದೆ ಎಂದು ಆರೋಪಿಸಿ ಗ್ರಾಮದ ನಿವಾಸಿಗರು ಮತ್ತು ವಿವಿಧ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ವೈದ್ಯನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಎಫ್‌ಐಆರ್ ದಾಖಲು: ತನ್ನ ಮಗಳ ಸಾವಿಗೆ ಖಾಸಗಿ ವೈದ್ಯ, ಮೂಲತಃ ಸಿಂಧನೂರು ತಾಲೂಕಿನ ಆರ್.ಎಚ್ ಕ್ಯಾಂಪ್ ನಿವಾಸಿ ಉತ್ತಮಕುಮಾರ್ ಸರ್ಕಾರ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ತಂದೆ ಹುಲಿಗೆಪ್ಪ ದೂರು ನೀಡಿದ್ದಾರೆ. ಈ ದೂರಿನ ಅನ್ವಯ, ಕವಿತಾಳ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.