ಧಾರವಾಡ: ನಕಲಿ ಅಂಕಪಟ್ಟಿ ಸೃಷ್ಟಿಸಿ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗ ನೌಕರಿ ಪಡೆದಿದ್ದ ವ್ಯಕ್ತಿಗೆ ಹಾಗೂ ಖೊಟ್ಟಿ ಅಂಕಪಟ್ಟಿ ಸೃಷ್ಟಿಗೆ ಸಹಾಯ ಮಾಡಿದ ವ್ಯಕ್ತಿಗೆ ಧಾರವಾಡದ ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಜೈಲು ಹಾಗೂ 30,000 ರೂ. ದಂಡದ ಶಿಕ್ಷೆ ವಿಧಿಸಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವರೂರಿನ ಶ್ರೀಮಂದ್ರ ವಸಂತ ವರೂರ ದ್ವಿತಿಯ ಪಿಯುಸಿ ಅಂಕ ಪಟ್ಟಿ ತಿದ್ದಿ ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಗೊಂಡಿದ್ದನು. ಶ್ರೀಮಂದ್ರ 2005ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 301 ಅಂಕ ಪಡೆದಿದ್ದನು. ಹಾನಗಲ್ ತಾಲೂಕು ಬಾಳಂಬೀಡ್‌ನ ನಾರಾಯಣ ಬಸಪ್ಪ ಕರೆವ್ವನವರ ಅವನೊಂದಿಗೆ ಸೇರಿ ಒಟ್ಟು 529 ಅಂಕಗಳ ನಕಲಿ ಅಂಕಪಟ್ಟಿ ಸೃಷ್ಟಿಸಿ ಖೊಟ್ಟಿ ಅಂಕಪಟ್ಟಿ ನೀಡಿ ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಗೊಂಡಿದ್ದ.
ಪ್ರಕರಣದ ಸಾಕ್ಷಿ ವಿಚಾರಣೆ ನಡೆಸಿ ವಾದ-ವಿವಾದ ಆಲಿಸಿದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅವಿನಾಶ ಗಾಳಿ, ಶ್ರೀಮಂದ್ರ ವರೂರ ಹಾಗೂ ನಾರಾಯಣ ಕರೆವ್ವನವರಗೆ ತಲಾ 30,000 ರೂ. ದಂಡ ಹಾಗೂ 3 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಭಿಯೋಜನೆಯ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಾಯ್.ಜೆ. ಸಣಬಸನ್ನವರ ವಾದ ಮಂಡಿಸಿದರು.
ಧಾರವಾಡ ಉಪನಗರ ಪೊಲೀಸ್ ಠಾಣೆಯ ಪಿಎಸ್‌ಐ ಆರ್.ಡಿ. ನೀಲಣ್ಣವರ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ಅಂತಿಮ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ವಾಯ್.ಜೆ. ಸಣಬಸನ್ನವರ ತಿಳಿಸಿದ್ದಾರೆ.





















