Home Advertisement
Home ನಮ್ಮ ಜಿಲ್ಲೆ ಬೆಳಗಾವಿ LPG ಕೊರತೆ – ಸಾಲದ ಒತ್ತಡಕ್ಕೆ ಹೊಟೇಲ್ ಮಾಲೀಕ ಆತ್ಮಹತ್ಯೆ

LPG ಕೊರತೆ – ಸಾಲದ ಒತ್ತಡಕ್ಕೆ ಹೊಟೇಲ್ ಮಾಲೀಕ ಆತ್ಮಹತ್ಯೆ

0
113

ಬೆಳಗಾವಿ (ಹುಕ್ಕೇರಿ): ಸಾಲದ ಒತ್ತಡ ಹಾಗೂ ವ್ಯವಹಾರ ಸಂಕಷ್ಟದಿಂದ ಮನನೊಂದು ಹೊಟೇಲ್ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಹುಕ್ಕೇರಿ ಹಳೆಯ ಬಸ್ ನಿಲ್ದಾಣದ ಸಮೀಪದ “ಹನುಮಾನ್ ಹೊಟೇಲ್” ಮಾಲೀಕ ರಾಮ ಹಳ್ಳೂರಿ (ಸುಮಾರು 45) ಅವರು ತಮ್ಮದೇ ಹೊಟೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್ ಮೂಲಗಳಿಂದ ದೃಢಪಟ್ಟಿದೆ.

ವ್ಯವಹಾರ ಸಂಕಷ್ಟ – ಆತ್ಮಹತ್ಯೆಗೆ ಕಾರಣವೇ?: ಕಳೆದ ಕೆಲವು ದಿನಗಳಿಂದ ಹೊಟೇಲ್‌ಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದೊರೆಯದೆ, ಹೋಟೆಲ್ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದರಿಂದ ಆದಾಯ ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಸಾಲದ ಕಂತುಗಳು ಹಾಗೂ ಬಡ್ಡಿಯನ್ನು ತೀರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸ್ಥಳೀಯರ ಪ್ರಕಾರ, ರಾಮ ಹಳ್ಳೂರಿ ಹಲವು ವರ್ಷಗಳಿಂದ ಹೋಟೆಲ್ ವ್ಯವಹಾರ ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿದ್ದವು. ಸಾಲಗಾರರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಅವರು ಮಾನಸಿಕವಾಗಿ ಕುಗ್ಗಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಹುಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇದೇ ವೇಳೆ, ಸ್ಥಳೀಯ ವ್ಯಾಪಾರಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜಿನಲ್ಲಿ ಉಂಟಾಗಿರುವ ವ್ಯತ್ಯಯಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.