ಬೋಗೋಟಾ (ಕೊಲಂಬಿಯಾ): ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, 124 ಜನರಿದ್ದ ವಾಯುಪಡೆಯ ವಿಮಾನ ಪತನಗೊಂಡು ಕನಿಷ್ಠ 66 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಸುಮಾರು 48 ಮಂದಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೇಕಾಫ್ ಬಳಿಕವೇ ದುರಂತ : ಅಧಿಕಾರಿಗಳ ಮಾಹಿತಿ ಪ್ರಕಾರ, ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ-130 ವಿಮಾನವು ಪೆರು ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಪ್ರದೇಶದಿಂದ ಹಾರಾಟ ಆರಂಭಿಸಿತ್ತು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಯಂತ್ರಣ ತಪ್ಪಿ ನೆಲಕ್ಕಪ್ಪಳಿಸಿದೆ. ಬಳಿಕ ಭಾರಿ ಸ್ಫೋಟ ಸಂಭವಿಸಿದ್ದು ಸಂಪೂರ್ಣ ವಿಮಾನ ಬೆಂಕಿಗೆ ಆಹುತಿಯಾಗಿದೆ
ಘಟನಾ ಸ್ಥಳವು ನಗರ ಕೇಂದ್ರದಿಂದ ಕೇವಲ 3 ಕಿ.ಮೀ ದೂರದಲ್ಲಿದ್ದು, ಸ್ಫೋಟದ ಶಬ್ದ ದೂರದವರೆಗೆ ಕೇಳಿಬಂದಿದೆ.
ಮದ್ದುಗುಂಡು ಸಾಗಣೆ – ಅಪಘಾತದ ತೀವ್ರತೆ ಹೆಚ್ಚಳ: ವಿಮಾನವು ಮದ್ದುಗುಂಡುಗಳನ್ನು ಹೊತ್ತೊಯ್ಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಇದರಿಂದ ಸ್ಫೋಟದ ತೀವ್ರತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ ಸಾವಿನ ಸಂಖ್ಯೆ ಹೆಚ್ಚಿರುವ ಸಾಧ್ಯತೆ ವ್ಯಕ್ತವಾಗಿದೆ.






















