Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ – ಸಿದ್ದರಾಮಯ್ಯ ವಿಶ್ವಾಸ

ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ – ಸಿದ್ದರಾಮಯ್ಯ ವಿಶ್ವಾಸ

0
182

ದಾವಣಗೆರೆ: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಈ ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯ ಎಂಬಿಎ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯ ಚುನಾವಣೆಗಳ ಜೊತೆಗೆ ನಡೆಯುತ್ತಿರುವ ಈ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಮುನ್ನಡೆ ಸಿಗಲಿದೆ ಎಂದರು.

ಟಿಕೆಟ್ ಅಸಮಾಧಾನ – ಸಮಾಧಾನಕ್ಕೆ ಪ್ರಯತ್ನ : ಪಕ್ಷದೊಳಗಿನ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೆಲ ಅಸಮಾಧಾನಗಳು ಇದ್ದುದನ್ನು ಒಪ್ಪಿಕೊಂಡ ಸಿಎಂ, “ಆಕಾಂಕ್ಷಿಗಳಿಗೆ ಟಿಕೆಟ್ ಸಿಗದಿದ್ದರೆ ಅಸಮಾಧಾನ ಸಹಜ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಹಾಗೂ ಬಾಗಲಕೋಟೆಯಲ್ಲಿ ಕೆಲ ನಾಯಕರಲ್ಲಿ ಅಸಮಾಧಾನವಿದೆ. ಆದರೆ ನಾವು ಎಲ್ಲರನ್ನೂ ಸಮಾಧಾನಪಡಿಸಿ, ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವಂತೆ ಮಾಡುತ್ತೇವೆ” ಎಂದು ಹೇಳಿದರು.

ಬಿಜೆಪಿ ಹೇಳಿಕೆಗಳಿಗೆ ತಿರುಗೇಟು : ಉಪಚುನಾವಣೆಯ ಫಲಿತಾಂಶ 2028ರ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, “ರಾಮನಗರ, ಶಿಗ್ಗಾಂವ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ತಮ್ಮವರನ್ನೇ ಗೆಲ್ಲಿಸಿಕೊಳ್ಳಲಿಲ್ಲ. ಅವರು ಸುಮ್ಮನೆ ಹೇಳಿಕೆ ಕೊಡುತ್ತಿದ್ದಾರೆ. ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ” ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಮೇಲೆ ಭರವಸೆ: ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಜನರಲ್ಲಿ ವಿಶ್ವಾಸ ಮೂಡಿಸಿದ್ದು, ದಲಿತರು, ಹಿಂದುಳಿದವರು, ಬಡವರು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂದು ಸಿಎಂ ತಿಳಿಸಿದರು. “ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಇದೇ ನಮ್ಮ ಗೆಲುವಿನ ಬಲ” ಎಂದು ಹೇಳಿದರು.