ಬೆಂಗಳೂರು: ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿ, ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಡಿಜಿಪಿ ಕೆ.ರಾಮಚಂದ್ರ ರಾವ್ ಅವರ ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಉನ್ನತ ಮಟ್ಟದ ಸಮಿತಿಯು ಈ ವಿಡಿಯೋ ಅಸಲಿ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ವಿಡಿಯೋಗಳು ಸಂಪೂರ್ಣವಾಗಿ ನಿಜವಾಗಿದ್ದು, ಅವು ಯಾವುದೇ ರೀತಿಯ ಡೀಪ್‌ಫೇಕ್, ಕೃತಕ ಬುದ್ಧಿಮತ್ತೆ ನಿರ್ಮಿತ ಅಥವಾ ಎಡಿಟ್ ಮಾಡಲಾದ ದೃಶ್ಯಗಳಲ್ಲ ಎಂಬುದು ಇದೀಗ ಅಧಿಕೃತವಾಗಿ ದೃಢಪಟ್ಟಿದೆ. ಈ ಮೂಲಕ ನಿವೃತ್ತಿಯ ಅಂಚಿನಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗೆ ತೀವ್ರ ಕಾನೂನಿನ ಸಂಕಷ್ಟ ಎದುರಾಗಿದೆ.
ರಾಜ್ಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರ್ಕಾರವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ಉನ್ನತ ಮಟ್ಟದ ಸಮಿತಿಯು ಸರ್ಕಾರಕ್ಕೆ ಬರೋಬ್ಬರಿ 100 ಪುಟಗಳ ಸಮಗ್ರ ವರದಿಯನ್ನು ಸಲ್ಲಿಸಿದ್ದು, ವಿಡಿಯೋ ಅಸಲಿಯತ್ತನ್ನು ಸಂಪೂರ್ಣವಾಗಿ ಬಯಲು ಮಾಡಿದೆ.























